ಗಂಗಾವತಿ: ಪ್ರೌಢಶಾಲೆಯಲ್ಲಿ ಅಡುಗೆ ಮಾಡುವ ಮಹಿಳೆಗೆ ಕಲ್ಮಠದ ಪೀಠಾಧಿಕಾರಿ ಮತ್ತು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೊಟ್ಟೂರೇಶ್ವರ ಸ್ವಾಮೀಜಿ ಹಾಗೂ ಮತ್ತೋರ್ವ ಕೊಲೆ ಬೆದರಿಕೆ ಹಾಕಿ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಕೊಟ್ಟೂರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಹಿರೇಜಂತಕಲ್ ನಿವಾಸಿ ಕಮಲಾಕ್ಷಿ ಅಲಿಯಾಸ್ ನಿರ್ಮಲಾ ಮಲ್ಲಯ್ಯ ಸ್ವಾಮಿ ಎಂಬುವರು ಗಂಗಾವತಿ ನಗರ ಠಾಣೆಯಲ್ಲಿ ಬಸವಲಿಂಗಮ್ಮ ಹಾಗೂ ಕಲ್ಮಠದ ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ.
'ನಾನು ಅಡುಗೆ ಕೆಲಸಕ್ಕೆ ಹೋದಾಗ ಬಸವಲಿಂಗಮ್ಮ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ. ಸ್ವಾಮೀಜಿ ಬಳಿ ಪಿಸ್ತೂಲ್ ಇದ್ದು, ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ. ಸ್ವಾಮೀಜಿ ಕೂಡ ಅವಾಚ್ಯವಾಗಿ ನಿಂದಿಸಿದ್ದಾರೆ' ಎಂದು ಮಹಿಳೆ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೊಟ್ಟೂರು ಸ್ವಾಮೀಜಿ, 'ಮಹಿಳೆ ನೀಡಿರುವ ದೂರು ಸಂಪೂರ್ಣ ಸುಳ್ಳು. ಆಕೆಯನ್ನು ಮಾರ್ಚ್ ತಿಂಗಳಲ್ಲಿಯೇ ಕೆಲಸದಿಂದ ಬಿಡಿಸಲಾಗಿತ್ತು. ಹೀಗಾಗಿ, ದುರುದ್ದೇಶದಿಂದ ದೂರು ದಾಖಲಿಸಿದ್ದಾಳೆ. ಆಕೆಯ ಮೇಲೆ ಶಾಲೆಯಲ್ಲಿ ಸಾಕಷ್ಟು ದೂರುಗಳಿದ್ದವು. ತಿಳಿ ಹೇಳಿದರೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಹೀಗಾಗಿ, ಸಮಿತಿಯ ಸದಸ್ಯರಲ್ಲಿ ಚರ್ಚಿಸಿ ಕೆಲಸದಿಂದ ಬಿಡಿಸಲಾಗಿದೆ. ಇದರಿಂದ ಕೋಪಗೊಂಡು ದುರುದ್ದೇಶಪೂರ್ವಕವಾಗಿ ಮಹಿಳೆ ದೂರು ದಾಖಲಿಸಿದ್ದಾರೆ' ಎಂದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧ ಇಡಿ ಚಾರ್ಜ್‌ಶೀಟ್