ಕುಷ್ಟಗಿ (ಕೊಪ್ಪಳ): ಪುರಸಭೆಯ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ತಟಸ್ಥಗೊಂಡಿದ್ದ ರಾಜಕೀಯ ಕಾರ್ಯ ಚಟುವಟಿಕೆ ಇದೀಗ ಬಿರುಸುಗೊಂಡಿದೆ.
ಕಳೆದೆರೆಡು ವರ್ಷಗಳ ಹಿಂದೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ಒಟ್ಟು 23 ಸ್ಥಾನಗಳ ಪೈಕಿ, ಕಾಂಗ್ರೆಸ್-12, ಬಿಜೆಪಿ-8, ಪಕ್ಷೇತರ 2 ಹಾಗೂ ಅವಿರೋಧ ಅಯ್ಕೆ 1 ಸ್ಥಾನ ನೀಡಿದ್ದು ಕುಷ್ಟಗಿ ಜನರ ಆದೇಶವಾಗಿತ್ತು. ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆತಿದ್ದರೂ ಸಹ ಎಲ್ಲಾ ಸದಸ್ಯರನ್ನು ಹಿಡಿದಿಟ್ಟುಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಸರ್ವ ಸಮ್ಮತ ಅಭ್ಯರ್ಥಿಗಳನ್ನು ನಿಯೋಜಿಸುವುದು ಪಕ್ಷಕ್ಕೆ ಸವಾಲಾಗಿದೆ. ಕಾಂಗ್ರೆಸ್ನ ಎಲ್ಲಾ ಸದಸ್ಯರು ಪಕ್ಷದ ವರಿಷ್ಠರ ಮಾತಿಗೆ ಬದ್ಧವೆಂದು ಮೇಲ್ನೋಟಕ್ಕೆ ಹೇಳುತ್ತಿದ್ದರೂ ಸಹ ಯಾವ ಹೊತ್ತಿನಲ್ಲಿ ಕೈ ಕೊಡುತ್ತಾರೋ ಎಂಬುದು ಪಕ್ಷದಲ್ಲಿನ ತಳಮಳಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಚಿರಂಜೀವಿ ಹಿರೇಮಠ, ವೀರೇಶಗೌಡ ಬೆದವಟ್ಟಿ ಅಧ್ಯಕ್ಷ ಸ್ಥಾನಕ್ಕೇರಲು ಪ್ರಯತ್ನಿಸುತ್ತಿದ್ದು, ಈ ನಡುವೆ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಪುನಃ ಅಧ್ಯಕ್ಷರಾಗಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಕೋಳೂರು, ಗೀತಾ ತುರಕಾಣಿ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಮಹಿಳಾ ಸ್ಥಾನಕ್ಕೆ ಮೀಸಲಾತಿ ಇರುವ ಕಾರಣ ಈ ಇಬ್ಬರ ಪೈಕಿ ಒಬ್ಬರಿಗೆ ಉಪಾಧ್ಯಕ್ಷೆಯ ಖುರ್ಚಿ ಒಲಿದು ಬರಲಿದೆ.
ಇಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಕಾರಣ ಅಧಿಕಾರಕ್ಕಾಗಿ ಕಡೇ ಘಳಿಗೆಯವರೆಗೂ ಪ್ರಯತ್ನದಲ್ಲಿರುತ್ತದೆ. ಕಾಂಗ್ರೆಸ್ ಪಕ್ಷದ ಅತೃಪ್ತ ಸದಸ್ಯರುಗಳನ್ನು ಸೆಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಸಂಖ್ಯಾಬಲ ಕುಗ್ಗಿಸುವ ಹವಣಿಕೆಯಲ್ಲಿದೆ. ಬಿಜೆಪಿಗೆ ಪಕ್ಷೇತರರಿಬ್ಬರು ಸಾಥ್ ನೀಡಿದ್ದು, ಕೈ ಪಾರ್ಟಿಯ ಇನ್ನಿಬ್ಬರನ್ನು ಸೆಳೆಯುವ ಯತ್ನಕ್ಕೆ ಕೈಹಾಕಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.