ಗಂಗಾವತಿ(ಕೊಪ್ಪಳ): ಕಾಲೇಜು ಶಿಕ್ಷಣ ಪಡೆಯಲು ಮಕ್ಕಳು ನಿತ್ಯ ತಮ್ಮ ಜೀವವನ್ನು ಪಣಕ್ಕಿಟ್ಟು ಸಾರಿಗೆ ಸಂಸ್ಥೆಯ ವಾಹನದಲ್ಲಿ ಸಂಚರಿಸಬೇಕಾದ ದುಃಸ್ಥಿತಿ ಇದೆ. ವಿದ್ಯಾರ್ಥಿಗಳು ಬಸ್ನ ಬಾಗಿಲಲ್ಲಿ ಜೋತಾಡಿಕೊಂಡು ಕಾಲೇಜಿಗೆ ಹೋಗುತ್ತಿದ್ದಾರೆ.
ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಿಂದ ಮೂರು ಕಿಲೋಮೀಟರ್ ಅಂತರದಲ್ಲಿರುವ ಆನೆಗೊಂದಿ ರಸ್ತೆಯ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಲು ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕಾಲೇಜಿನಲ್ಲಿ ಸುಮಾರು 3500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ಕೊಪ್ಪಳ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಗರಿಷ್ಠ ದಾಖಲೆ ಪ್ರಮಾಣ. ನಿತ್ಯ ಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳು ಕಾಲೇಜಿಗೆ ಬರುತ್ತಾರೆ. ಈ ಪೈಕಿ ಬೆರೆಳೆಣಿಕೆಯ ಮಕ್ಕಳು ಸ್ವಂತ ವಾಹನ, ಆಟೋ ವ್ಯವಸ್ಥೆ ಹೊಂದಿದ್ದಾರೆ. ಪದವಿ ಓದುವ ಆಸೆಯಿಂದ ಗ್ರಾಮೀಣ ಭಾಗದಿಂದ ಬರುವ ಮಕ್ಕಳೂ ಸೇರಿದಂತೆ ಮಿಕ್ಕ ಸುಮಾರು 1500 ವಿದ್ಯಾರ್ಥಿಗಳು ಸಾರಿಗೆ ವಾಹನದಲ್ಲಿ ಪ್ರಯಾಣಿಸಬೇಕು.
ಬೆಳಗ್ಗೆ 9.30ಕ್ಕೆ ಕಾಲೇಜು ಆರಂಭವಾಗುತ್ತಿದ್ದು, 8.50 ರಿಂದ ಹತ್ತು ಗಂಟೆಯವರೆಗೆ ಬಸ್ ನಿಲ್ದಾಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರುತ್ತಾರೆ. ಆದರೆ, ಇಲಾಖೆಯಿಂದ ಕಾಲೇಜಿನ ಸಮಯದಲ್ಲಿ ಕೇವಲ ಮೂರರಿಂದ- ನಾಲ್ಕು ವಾಹನಗಳನ್ನು ಮಾತ್ರ ಓಡಿಸಲಾಗುತ್ತಿದೆ.
ಹೀಗಾಗಿ, ಮಕ್ಕಳು ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಬೇಕಾದ್ರೆ ಒಂದೇ ವಾಹನದಲ್ಲಿ ನೂರಾರು ಜನ ನೇತಾಡಿಕೊಂಡು ಹೋಗಬೇಕಿದೆ. ಕೆಲ ಸಂದರ್ಭದಲ್ಲಿ ಮಕ್ಕಳು ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ.
ಓದಿ: ಮೈದುಂಬಿ ಹರಿಯುತ್ತಿರುವ ತುಂಗಾಭದ್ರಾ ಜಲಾಶಯ.. ನೋಡುಗರ ಕಣ್ಣಿಗೆ ರಸದೌತಣ