ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ನೇರವಾಗಿ ಎಸ್ವಿಪಿ ವೃತ್ತಕ್ಕೆ ಆಗಮಿಸಿ ಸರ್ದಾರ್ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಪೊಲೀಸ್ ಪರೆಡ್ ಮೈದಾನದಲ್ಲಿ ಧ್ವಜಾರೋಹಣ ನೇರವೆರಿಸಿ ವಿವಿಧ ತುಕಡಿಗಳಿಂದ ಹಾಗೂ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಸಿಎಂ ಅವರಿಗೆ ಸಂಸದ ಉಮೇಶ್ ಜಾಧವ್, ಜಿಲ್ಲಾಧಿಕಾರಿ ಬಿ. ಶರತ್ ಸೇರಿದಂತರ ಸ್ಥಳಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಾಥ್ ನೀಡಿದರು.
ಕೊಪ್ಪಳದಲ್ಲಿಯೂ ಕೂಡ 72 ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಇಂದು ಇದೇ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಹೆಸರಿನಲ್ಲಿ ಕಾರ್ಯಕ್ರಮ ಜರುಗಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಹೈದರಾಬಾದ್ ನಿಜಾಮನ ಆಡಳಿತ ಕಪಿಮುಷ್ಠಿಯಿಂದ ಈ ಪ್ರದೇಶ ಸ್ವತಂತ್ರಗೊಂಡಿತು. ಅಂತಹ ಮಹನೀಯರನ್ನು ನಾವು ಸ್ಮರಿಸಿಕೊಳ್ಳಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶದ ಜನರ ಭಾವನೆಗಳನ್ನು ಅರಿತುಕೊಂಡು ಸಿಎಂ ಯಡಿಯೂರಪ್ಪ ಅವರು ಈ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಗುರಿ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.