ಗಂಗಾವತಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಸ್ವಚ್ಛತೆ ಇಲ್ಲದೇ ಹದಗೆಟ್ಟಿದ್ದು, ವರ್ತಕರು ಹಾಗೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಂಸ್ಥೆಯೊಂದು ಇಲ್ಲಿನ ಸ್ವಚ್ಛತೆಯ ಟೆಂಡರ್ ಪಡೆದುಕೊಂಡಿದ್ದು, ಮಾಸಿಕ 4.26 ಲಕ್ಷ ರೂಪಾಯಿ ಮೊತ್ತದ ಹಣವನ್ನು ಸ್ವಚ್ಛತೆಗಾಗಿ ಎಪಿಎಂಸಿಯಿಂದ ಶುಲ್ಕ ವಸೂಲಿ ಮಾಡುತ್ತಿದೆ. ಆದರೆ ಕಾಟಾಚಾರಕ್ಕೆ ಎಂಬಂತೆ ಸ್ವಚ್ಛತೆ ನಡೆಸುತ್ತಿದೆ ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಪಿಎಂಸಿ ಕಾರ್ಯದರ್ಶಿ ಕೆ.ಎಚ್ ಗುರುಪ್ರಸಾದ್, ಇಡೀ ಪ್ರಾಂಗಣ 165 ಎಕರೆ ಇದ್ದು, ಇಷ್ಟು ದೊಡ್ಡ ಪ್ರಾಂಗಣದಲ್ಲಿ ನಿತ್ಯ ಸ್ವಚ್ಛತೆ ಕೈಗೊಳ್ಳುವುದು ಸೀಮಿತ ಸಿಬ್ಬಂದಿಯಿಂದ ಸಾಧ್ಯವಿಲ್ಲ. ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ಸ್ವಚ್ಛತೆ ಮಾಡಿಸಲಾಗುತ್ತಿದೆ ಎಂದರು.