ಕೋಲಾರ : ಚರಂಡಿ ನೀರು ಹರಿಯುವ ವಿಚಾರವಾಗಿ ಎರಡು ಗುಂಪುಗಳು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಆವಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಯರಕೋಡ ಮುನಿಸ್ವಾಮಿ ಅವರ ಗುಂಪು ಮತ್ತು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಾಲಾವತಿ ಅವರ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ನಾಲ್ಕು ಮಂದಿ ಮಹಿಳೆಯರೂ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ಈ ಘಟನೆ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವೆಂಕಟರಾಮ ಅವರು ಮಾತನಾಡಿದ್ದು, ನಮ್ಮೂರಿನಲ್ಲಿ 20 ಮನೆಗಳು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾವು ಕಾಂಗ್ರೆಸ್ಗೆ ಬೆಂಬಲ ನೀಡುತ್ತಿಲ್ಲ ಎಂದು ದಿನನಿತ್ಯ ಮನೆ ಮುಂದೆ ಬಂದು ಜಗಳ ಮಾಡುತ್ತಿದ್ದರು. ನಿನ್ನೆ ಚರಂಡಿ ನೀರು ಹರಿಯುವ ಸಣ್ಣ ವಿಚಾರವಾಗಿ ಗಲಾಟೆ ನಡೆದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಯರಕೋಡ ಮುನಿಸ್ವಾಮಿ ಮತ್ತು ಪಕ್ಷದ ಇನ್ನಿತರ ಮುಖಂಡರು ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಗುಂಪು ಕಟ್ಟಿಕೊಂಡು 10 ಮಂದಿ ಜೆಡಿಎಸ್ ಮುಖಂಡರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ರಾಯಲಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಿಂದ ಸುಲಿಗೆ; ಪುಲಿಕೇಶಿ ನಗರ ಠಾಣೆಯ ಮತ್ತಿಬ್ಬರು ಕಾನ್ಸ್ಟೇಬಲ್ಸ್ ಅಮಾನತು