ಕೊಪ್ಪಳ: ಕ್ಷೌರ ಮಾಡುವ ಕುರಿತಂತೆ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ 16 ಜನರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಗಲಾಟೆ ನಡೆದಿತ್ತು. ಇದೇ ಜೂನ್ 6 ರಂದು ಗ್ರಾಮದ ಸಣ್ಣ ಹನುಮಂತ ಹಾಗೂ ಬಸವರಾಜ ಎಂಬುವವರು ಕ್ಷೌರ ಮಾಡಿಸಲು ಹೋಗಿದ್ದರು. ಆಗ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
![Koppal](https://etvbharatimages.akamaized.net/etvbharat/prod-images/kn-kpl-03-09-dooru-daakhalu-visuals-ka10041_09062021104530_0906f_1623215730_889.jpg)
ಅಲ್ಲದೆ ಇದೇ ಸಂದರ್ಭದಲ್ಲಿ ಸ್ಥಳೀಯ ಸವರ್ಣೀಯರು ಸೇರಿಕೊಂಡು ಕ್ಷೌರ ಮಾಡಿಸಿಕೊಳ್ಳಲು ಬಂದ ಈ ಇಬ್ಬರ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕ್ಷೌರಿಕರಿಬ್ಬರು ಹಾಗೂ ಸ್ಥಳೀಯ 14 ಜನರ ಮೇಲೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳ ಡಿವೈಎಸ್ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ತಿಳಿದು ಬಂದಿದೆ.