ಕುಷ್ಟಗಿ(ಕೊಪ್ಪಳ) : ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ತ್ಯಾಗ ಅಲ್ಲ. ಬಿಜೆಪಿಯವರೇ ಯಡಿಯೂರಪ್ಪ ಅವರನ್ನು ಹೊರಗೆ ದಬ್ಬಿದ್ದಾರೆ. ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ ವಿಜಯೇಂದ್ರನಿಗೆ ಎಲ್ಲಿ ಟಿಕೇಟ್ ಘೋಷಣೆ ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಟೀಕಿಸಿದರು.
ಕುಷ್ಟಗಿಯ ಕಾಂಗ್ರೆಸ್ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಅವರ ಪುತ್ರ ಮದುವೆಯ ವಲೀಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನವೆಂಬರ್- ಡಿಸೆಂಬರ್ ಹೊತ್ತಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿಗೆ ಕ್ಯಾಬಿನೆಟ್ ವಿಸ್ತರಣೆಗೆ ಬಿಜೆಪಿ ಬಿಟ್ಟಿಲ್ಲ. ಗುಜರಾತ್ ಜೊತೆಗೆ ಕರ್ನಾಟಕದ ಚುನಾವಣೆ ನಡೆಯಲಿದೆ ಎಂದು ಅವಧಿ ಪೂರ್ವ ಚುನಾವಣೆಯ ಬಗ್ಗೆ ಹೇಳಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಾಂತರ ಪರ್ವ : ರಾಜ್ಯಾದ್ಯಂತ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ 70 ಶಾಸಕರು ಹಾಗೂ ನಾಯಕರು ಜೆಡಿಎಸ್ ಸೇರಲಿದ್ದಾರೆ. ಅಕ್ಟೋಬರ್ನಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಲಿದೆ ಎಂದರು. ಸೋನಿಯಾ ಗಾಂಧಿಗೆ ಒಂದು ನೋಟೀಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗರು ಬೀದಿಗೆ ಇಳಿದಿದ್ದಾರೆ. ಜನರ ಸಂಕಷ್ಟಕ್ಕೆ ಹೋರಾಟ ಇಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಮಳೆಯಾಗಿ ಜನರು ತೊಂದರೆ ಅನುಭವಿಸಿದಾಗ ಇವರು ಎಲ್ಲಿದ್ದರು ಎಂದು ಇಬ್ರಾಹಿಂ ಪ್ರಶ್ನಿಸಿದರು.
ಇದನ್ನೂ ಓದಿ : ನಮ್ಮ ಪಕ್ಷದ ಬಾಹುಬಲಿ ಜಮೀರ್ ಅಹ್ಮದ್‌ಖಾನ್: ಸತೀಶ ಜಾರಕಿಹೊಳಿ
ಕೋಲಾರ ಮತ್ತು ಚಿಕ್ಕಬಳ್ಳಾಪೂರ ಜಿಲ್ಲೆಗಳು ಕಾಂಗ್ರೆಸ್ ಮುಕ್ತ ಆಗಲಿವೆ. ಮುನಿಯಪ್ಪ ಅವರನ್ನು ಸೋಲಿಸಿದ್ದಕ್ಕೆ ಅವರ ಸಮುದಾಯ ಸಿಟ್ಟಾಗಿದೆ ಇನ್ನು ಕೊಪ್ಪಳ ಜಿಲ್ಲೆಯಲ್ಲಿ 5 ಅಭ್ಯರ್ಥಿಗಳು ಜೆಡಿಎಸ್ನಿಂದ ಗೆಲ್ಲಲಿದ್ದಾರೆ. ಕೊಪ್ಪಳ, ಕುಷ್ಟಗಿಯಲ್ಲಿ ಕಾಂಗ್ರೆಸ್ ಸೋಲಲಿದ್ದು, ಗಂಗಾವತಿಯಲ್ಲಿ ಬಿಜೆಪಿ ಸೋಲಲಿದೆ ಎಂದ ಅವರು ಅದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ ಎಂದರು.
ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲ್ಲೋದು ಕಷ್ಟ : ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಸಿದ್ದರಾಮಯ್ಯ ಬಗ್ಗೆ ನನಗೆ ಅನುಕಂಪ ಇದೆ. ಅವರು ಅಸೆಂಬ್ಲಿಗೆ ಬರಬೇಕು ಅನ್ನೋದು ನನಗೂ ಆಸೆ ಇದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅವರು ಎಲ್ಲಿ ನಿಂತರೂ ಗೆಲ್ಲುವುದು ಕಷ್ಟ ಇದೆ.
ಸಿದ್ದರಾಮಯ್ಯ ದಾರಿ ತಪ್ಪಿದ್ದಾರೆ, ಸಿದ್ದರಾಮಯ್ಯರನ್ನ ನಾನೇ ಸಿಎಂ ಮಾಡಿದ್ದೇನೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲಲು ನಾನೇ ಕಾರಣ. ಹಗಲೆಲ್ಲ ಒಂದು ಕಡೆ, ರಾತ್ರಿ ಇಡೀ ಬಾದಾಮಿಯಲ್ಲಿ ಕೆಲಸ ಮಾಡಿ ಸಿದ್ದರಾಮಯ್ಯ ಗೆಲ್ಲಿಸಿದ್ದೇವೆ ಎಂದು ಇಬ್ರಾಹಿಂ ಹೇಳಿದರು.
ಇದನ್ನೂ ಓದಿ : 'ನನ್ನ ಮಗ ಶಿಕಾರಿಪುರದಿಂದ ಸ್ಪರ್ಧಿಸುತ್ತಾನೆಂದು ಹೇಳಿದ್ದೆ, ಅಂತಿಮ ನಿರ್ಧಾರ ಮೋದಿ, ಅಮಿತ್ ಶಾ ತೆಗೆದುಕೊಳ್ತಾರೆ'