ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯಲ್ಲಿ ರಾತ್ರಿ ಮತ್ತೆ ಬೋಂಗಾ ಬಿದ್ದಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಬಳಿ ಇರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ರಾತ್ರಿ ಬೋಂಗಾ ಬಿದ್ದಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೆ ಬಾರಿಗೆ ಕಾಲುವೆಯಲ್ಲಿ ಕೊರಕಲು ಕಾಣಿಸಿಕೊಂಡಿದೆ.
ಬಿದ್ದಿರುವ ರಂಧ್ರದ ಮೂಲಕ ಅಪಾರ ಪ್ರಮಾಣದ ನೀರು ಸೋರಿಕೆಯಾಗಿದೆ. ಪದೇ ಪದೆ ಕಾಲುವೆಗೆ ಬೋಂಗಾ ಬೀಳುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಈಗ ಭತ್ತದ ನಾಟಿ ಕಾರ್ಯ ನಡೆಯುತ್ತಿದ್ದು, ಈ ವೇಳೆಯಲ್ಲಿ ಕಾಲುವೆಗೆ ಬೋಂಗಾ ಬೀಳುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಘಟನೆ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಲೆಗೆ ನೀರು ಹರಿವಿನ ಪ್ರಮಾಣ ಕಡಿಮೆ ಮಾಡಿ ರಾತ್ರಿಯಿಂದ ಕಾಮಗಾರಿ ನಡೆಸಿ ಸದ್ಯಕ್ಕೆ ಬೋಂಗಾ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.