ಕೊಪ್ಪಳ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದ( ಎನ್ಎಚ್ಎಂ ) ಸಿಬ್ಬಂದಿ ಪ್ರತಿಭಟನೆಯಲ್ಲೂ ತಮ್ಮ ಸೇವಾಮನೋಭಾವ ಮೆರೆದಿದ್ದಾರೆ.
ಕಳೆದ 12 ದಿನಗಳಿಂದ ಇಡೀ ರಾಜ್ಯಾದ್ಯಂತ ಎನ್ಎಚ್ಎಂ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದು, ಕೊಪ್ಪಳದಲ್ಲಿಯೂ ಮುಂದುವರೆದಿದೆ. ಆದರೆ ಇಂದು ನಗರದಲ್ಲಿ ರಕ್ತದಾನ ಶಿಬಿರದ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಗರದ ಸರ್ಕಾರಿ ನೌಕರರ ಭವನದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯಲ್ಲಿ ಅನೇಕರು ರಕ್ತದಾನ ಮಾಡಿದರು. ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಿರಂತರವಾಗಿರುತ್ತದೆ. ಪ್ರತಿಭಟನೆಯಲ್ಲಿಯೂ ಏನಾದರೂ ಸೇವೆ ಮಾಡೋಣ ಎಂಬ ಉದ್ದೇಶದೊಂದಿಗೆ ನಾವು ರಕ್ತದಾನ ಮಾಡುತ್ತಿದ್ದೇವೆ ಎಂದು ಪ್ರತಿಭಟನಾನಿರತರು ತಿಳಿಸಿದರು.
ಕೊರೊನಾ ಹಿನ್ನೆಲೆ ರಕ್ತದಾನ ಶಿಬಿರಗಳು ನಡೆದಿಲ್ಲ. ಇತ್ತೀಚೆಗಷ್ಟೇ ರಕ್ತದಾನ ಶಿಬಿರಗಳು ನಡೆಯುತ್ತಿದ್ದು, ರಕ್ತದ ಕೊರತೆ ನೀಗಿಸುವ ಕೆಲಸವಾಗುತ್ತಿದೆ ಎಂದ್ರು. ಇನ್ನು ಪ್ರತಿಭಟನೆಯ ಸಂದರ್ಭದಲ್ಲಿ ರಕ್ತದಾನದ ಮೂಲಕ ತಮ್ಮ ಹಕ್ಕೋತ್ತಾಯ ಮಾಡಿರುವುದು ವಿಶೇಷವಾಗಿದೆ.