ಕೊಪ್ಪಳ : ಅಕ್ಕಿ ಕೊಡುವ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳದಲ್ಲಿಂದು ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಆಹಾರ ನಿಗಮ ಅಕ್ಕಿ ದಾಸ್ತಾನಿದೆ ಎಂದು ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರ ದಾಸ್ತಾನು ಇಲ್ಲ ಎಂದು ಹೇಳುತ್ತಿದೆ. ಅಂದರೆ, ಇವರ ಉದ್ದೇಶ ಬಡವರಿಗೆ ಅಕ್ಕಿ ಕೊಟ್ಟರೆ ಅದು ಕಾಂಗ್ರೆಸ್ ಪಕ್ಷಕ್ಕೆ ಹೆಸರು ತರುತ್ತದೆ ಎಂಬುದಾಗಿದೆ. ಅದಕ್ಕಾಗಿ ಕೇಂದ್ರ ಅಕ್ಕಿ ಕೊಡುವ ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.
ಅಕ್ಕಿ ಕೊಡುವ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ಧೋರಣೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಬಿಜೆಪಿಯವರಿಗೆ ಬಡವರು ಬೇಕಿಲ್ಲ, ಕಾರ್ಪೊರೇಟರ್ಸ್ ಅನ್ನು ಮಾತ್ರ ಬದುಕಿಸುವ ಕೆಲಸ ಮಾಡುತ್ತಿದ್ದಾರೆ. ಅಕ್ಕಿ ಕೊಡುವ ಕುರಿತು ರಾಜ್ಯದ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರವನ್ನು ಯಾಕೆ ಕೇಳಬಾರದು? ಎಂದರು.
'10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ' : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅಕ್ಕಿ ಕೊಡುತ್ತಿಲ್ಲ. ರಾಜ್ಯದ ಎಲ್ಲ ಬಡವರಿಗೂ ಕೊಡುತ್ತಿದ್ದೇವೆ. ಇದರಲ್ಲಿ ನೀವು ಏನೇ ರಾಜಕಾರಣ ಮಾಡಿದರೂ ನಾವು 10 ಕೆಜಿ ಅಕ್ಕಿಯನ್ನು ಕೊಟ್ಟೇ ಕೊಡುತ್ತೇವೆ. ಇತರ ರಾಜ್ಯದೊಂದಿಗೆ ಸಿಎಂ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತ್ರಿಕ್ರಿಯಿಸಿ, ಈಗ ಸದ್ಯ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೇ ಮುಂದುವರೆಯುತ್ತಾರೆ. ಪಕ್ಷದಲ್ಲಿ ಯಾರನ್ನು ಸಿಎಂ ಮಾಡಬೇಕು ಎಂದು ಹೇಳುವಷ್ಟು ನಾನು ದೊಡ್ಡವನಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ನನಗೆ ಈಗ ಮಂತ್ರಿಸ್ಥಾನ ನೀಡಿದೆ. ಅದನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣವಿಲ್ಲ. ನಮ್ಮಲ್ಲಿರುವುದೊಂದೇ ಬಣ, ಅದು ಕಾಂಗ್ರೆಸ್ ಬಣ. ನಾನು ನಳಿನ್ ಕುಮಾರ್ ಅವರನ್ನು ಕೇಳುತ್ತೇನೆ. ವಿರೋಧ ಪಕ್ಷದ ನಾಯಕನ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಿಜೆಪಿಗರಿಗೆ ಇನ್ನು ನಮ್ಮ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?. ಬಿಜೆಪಿ ನಾಯಕರಿಗೆ ತಲೆ ಸರಿ ಇದೆಯೋ ಇಲ್ಲವೋ ಕೇಳಬೇಕಿದೆ. ನಳಿನ್ ಕುಮಾರ್ ಕಟೀಲ್ ಮೊದಲು ಈ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂಬುದನ್ನು ತಿಳಿದುಕೊಳ್ಳಲಿ. ರಾಜ್ಯದ ಜನರು ನಮಗೆ ಬಹುಮತ ನೀಡಿದ್ದಾರೆ. ನಾವು 135 ಸೀಟ್ ಗೆದ್ದಿದ್ದೀವಿ ಎಂದರು.
ಕನಕಗಿರಿಯಲ್ಲಿ ಕಲುಷಿತ ನೀರು ಕುಡಿದು ಮತ್ತೊಬ್ಬ ಬಾಲಕ ಸಾವಿಗೀಡಾದ ಪ್ರಕರಣಕ್ಕೆ ಪ್ರತ್ರಿಕ್ರಿಯಿಸಿದ ಸಚಿವರು, ಈ ಕುರಿತು ನಾನು ಸ್ಥಳಕ್ಕೆ ತೆರಳಿ ಜನರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಬಾಲಕನ ಸಾವಿಗೆ ನಿಜವಾದ ಕಾರಣ ಏನು ಎಂಬುದು ಸ್ಪಷ್ಟವಾಗಿ ತಿಳಿದುಕೊಂಡು ಪ್ರತ್ರಿಕ್ರಿಯಿಸುವುದಾಗಿ ಹೇಳಿದರು. ಹಾಗೆಯೇ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಪಾರ್ಕ್ ಸಂಬಂಧಿಸಿದಂತೆ ಮಾಹಿತಿ ತರಿಸಿಕೊಂಡಿದ್ದೇನೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಇದನ್ನೂ ಓದಿ : ಮೋದಿ ಕಡೆ ಬೆರಳು ಮಾಡದೆ ಅಕ್ಕಿ ಕೊಡಿ, ಇಲ್ಲವೇ ಅಕ್ಕಿ ಮೌಲ್ಯದ ಹಣ ನೀಡಿ: ಸಿ ಟಿ ರವಿ ಒತ್ತಾಯ