ಕೊಪ್ಪಳ: ಕಾಂಗ್ರೆಸ್ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಅನುದಾನ ನೀಡಲೇ ಇಲ್ಲ. ಕ್ಷೇತ್ರದ ಜನರ ಒಟ್ಟು ಅಭಿಪ್ರಾಯದ ಮೇಲೆ ಪಕ್ಷಾಂತರ ಮಾಡಬೇಕಾಯಿತು ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಕನಕಗಿರಿಯಲ್ಲಿ ನಡೆದ ಐತಿಹಾಸಿಕ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಇಂದು ನಡೆದ ಗರುಡೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪಗೌಡ ಪಾಟೀಲ್ ಅವರು, 2008 ರಿಂದ ನಾನು ಕನಕಗಿರಿಯ ಕನಕಾಚಲ ದೇವರ ಗರುಡೋತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ನಾನು ರಾಜಕೀಯವಾಗಿ ಬೆಳೆಯಲು ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಆಶೀರ್ವಾದ ಕಾರಣ. 2008 ರಲ್ಲಿ ಗರುಡೋತ್ಸವ ಮುಗಿಸಿ ಹೊರಬಂದಾಗ ನನಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರಬಹುದು ಅನ್ನೋ ಅನುಮಾನ ಇದೆ. ಈಗಾಗಲೇ ರಾಮುಲು, ವಿಜಯೇಂದ್ರ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ ಎಂದರು.
ಇನ್ನು ನಾನು ಅಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲು ಕ್ಷೇತ್ರದ ಎಲ್ಲ ಜನರ ಅಭಿಪ್ರಾಯ ಕಾರಣ. ಏಕೆಂದರೆ ಅಂದು ಬಿಜೆಪಿ ಮೂರು ಹೋಳಾಗಿತ್ತು. ಶ್ರೀರಾಮುಲು, ಯಡಿಯೂರಪ್ಪ ಅವರು ಬೇರೆ ಬೇರೆ ಪಕ್ಷ ಕಟ್ಟಿದರು. ಅಲ್ಲಿ ಭವಿಷ್ಯವಿಲ್ಲ ಎಂಬ ಕ್ಷೇತ್ರದ ಜನರ ಅಭಿಪ್ರಾಯದ ಮೇರೆಗೆ ನಾನು ಅಂದು ಪಕ್ಷಾಂತರ ಮಾಡಬೇಕಾಯಿತು ಎಂದರು.
ಓದಿ : ಕಲಬುರಗಿ: ಹೋಳಿ ಹಬ್ಬದಂದು ರಕ್ತದೋಕುಳಿ ಹರಿಸಿದ್ದ ಮೂವರು ಅರೆಸ್ಟ್!
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಕುರಿತಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಯತ್ನಾಳ್ ಹೇಳಿಕೆ ಕುರಿತಂತೆ ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ. ಮುಖ್ಯಮಂತ್ರಿಗಳು ಭರವಸೆ ಕೊಟ್ಟಂತೆ ನಾನು ಸಚಿವನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.