ಕುಷ್ಟಗಿ (ಕೊಪ್ಪಳ): ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಳಗಿ ಕೆರೆ ನಿರ್ಮಾಣವಾಗಿ ಐದಾರು ದಶಕವಾಗಿದ್ದರೂ, ಪುನಶ್ಚೇತನ ಕಾಣದೇ ಹೂಳಿನಿಂದ ಭರ್ತಿಯಾಗಿದೆ. ಹೂಳಿನಿಂದಾಗಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ.
1964ರಲ್ಲಿ ನಿರ್ಮಾಣವಾದ ಬೀಳಗಿ ಕೆರೆ, 25 ಎಕರೆ 9 ಗುಂಟೆ ವಿಸ್ತೀರ್ಣವಿದೆ. 540 ಮೀಟರ್ ಉದ್ದ ಹಾಗೂ 5 ಮೀಟರ್ ತಡೆಗೋಡೆ ಹೊಂದಿದ್ದು, ಕೆರೆಯ ನೀರಿನ ಸಂಗ್ರಹ ಸಾಮಾರ್ಥ್ಯ 3.83 mcft (ಮಿಲಿಯನ್ ಕ್ಯೂಬಿಕ್ ಫೀಟ್) ಇದೆ. ಕೆರೆ ಭರ್ತಿಯಾದಾಗ ವೇಸ್ಟವೇರ್ ಮೂಲಕ ಹೊರ ಹರಿವು 2,430 ಕ್ಯೂಸೆಕ್ಸ ಆಗಿದೆ.
ಶ್ರೀ ಚಂದಾಲಿಂಗ ಹಾಗೂ ಚಂದ್ರಗಿರಿ, ವೆಂಕಟಾಪೂರ ಗುಡ್ಡಗಾಡು ಪ್ರದೇಶದಲ್ಲಿ ಬೀಳುವ ಮಳೆ ನೀರು ಕಣಿವೆಗಳಲ್ಲಿ ಹರಿದು, ಬೀಳಗಿ ಕೆರೆ ಕಟ್ಟೆ ಸೇರುತ್ತಿದೆ. ಈ ಕೆರೆಯಲ್ಲಿ ನೀರಿಗಿಂತ ಹೂಳಿನ ಸಂಗ್ರಹವೇ ಹೆಚ್ಚಾಗಿದ್ದು, ಕೆರೆಯ ಸಂಗ್ರಹ ಸಾಮರ್ಥ್ಯ ಕ್ಷೀಣಿಸಿದೆ.
ಓದಿ : ಸಿಡಿ ಪ್ರಕರಣ.. ಎರಡನೇ ಬಾರಿ ಎಸ್ಐಟಿ ವಿಚಾರಣೆ ಎದುರಿಸಿದ ರಮೇಶ್ ಜಾರಕಿಹೊಳಿ
ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಪ್ರಮುಖ ಬೇಡಿಕೆ ಕೆರೆ ಹೂಳೆತ್ತುವುದೇ ಆಗಿದೆ. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರು ಕೆರೆ ಹೂಳೆತ್ತುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ಜನತೆಯದ್ದಾಗಿದೆ.