ಬೆಳಗಾವಿ/ ಕೊಪ್ಪಳ: ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳ ಪ್ರವೇಶಕ್ಕೆ ಇಲ್ಲಿನ ಕೆಎಲ್ಇ ಸಂಸ್ಥೆ ನಿರಾಕರಿಸಿದೆ. ಕಾಲೇಜು ಆಡಳಿತ ಮಂಡಳಿಯ ನಿರ್ಧಾರ ಖಂಡಿಸಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ಮರಳಿದರು.
ಹಿಜಾಬ್ ಧರಿಸಿದರೆ ಕಾಲೇಜು ಆವರಣಕ್ಕೆ ಪ್ರವೇಶವಿಲ್ಲ ಎಂದು ಇಲ್ಲಿನ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ. ಆಡಳಿತ ಮಂಡಳಿಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಕೆಲಹೊತ್ತು ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಬಳಿಕ ನಾಲ್ಕೈದು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.
ನಾವು ಮುಂಚೆಯಿಂದಲೂ ಬುರ್ಖಾ ಧರಿಸಿ ತರಗತಿ ಹಾಜರಾಗುತ್ತಿದ್ದೇವೆ. ಈಗ ಅವಕಾಶ ನಿರಾಕರಿಸಲಾಗುತ್ತಿದೆ. ನಾವು ತರಗತಿಯಲ್ಲಿ ಬುರ್ಖಾ ತೆಗೆಯುತ್ತೇವೆ. ಆದರೆ ಹಿಜಾಬ್ ತೆರವು ಮಾಡುವುದಿಲ್ಲ. ಮೊದಲು ಹಿಜಾಬ್, ಬುರ್ಖಾ ಎರಡಕ್ಕೂ ಇಲ್ಲಿ ಅವಕಾಶ ಇತ್ತು. ಈಗೇಕೆ ಅವಕಾಶ ನೀಡುತ್ತಿಲ್ಲ?. ಈವರೆಗೆ ನಾವು ಹಿಜಾಬ್ ಬಿಟ್ಟಿಲ್ಲ, ಬಿಡುವುದೂ ಇಲ್ಲ. ತರಗತಿ ಪ್ರವೇಶಕ್ಕೆ ಅವಕಾಶ ನೀಡದಿದ್ದರೆ ಮನೆಯಲ್ಲಿ ಕುಳಿತು ಅಭ್ಯಾಸ ಮಾಡುತ್ತೇವೆ. ಆದ್ರೆ ಹಿಜಾಬ್ ಧಾರಣೆ ನಿಲ್ಲಿಸುವುದಿಲ್ಲ. ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಸಂಪ್ರದಾಯದಂತೆ ಹಿಜಾಬ್ ಧರಿಸಲು ನಮಗೆ ಅವಕಾಶ ನೀಡುವ ವಿಶ್ವಾಸ ಇದೆ ಎಂದು ವಿದ್ಯಾರ್ಥಿನಿಯರು ಹೇಳಿದರು.
ಸ್ಥಳಕ್ಕೆ ಕ್ಯಾಂಪ್ ಠಾಣೆ ಪೊಲೀಸರು ಭೇಟಿ ನೀಡಿ ವಾತಾವರಣ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಕೊಪ್ಪಳದಲ್ಲಿ ನಿಷೇಧಾಜ್ಞೆ ಜಾರಿ: ಕಾಲೇಜು ಪುನರಾರಂಭ ಹಿನ್ನೆಲೆಯಲ್ಲಿ ನಗರದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಮುಂದೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ಆದೇಶಿಸಿದ್ದಾರೆ.
ಹಿಜಾಬ್ ಧರಿಸಿ ಕುಳಿತ ವಿದ್ಯಾರ್ಥಿನಿಯರು: ಕೊಪ್ಪಳ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಖಾ ಹಾಗೂ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ತರಗತಿ ಕೊಠಡಿಯಲ್ಲಿ ಕುಳಿತುಕೊಂಡ ದೃಶ್ಯ ಕಂಡುಬಂತು.
ಇದನ್ನೂ ಓದಿ: ಹುಬ್ಬಳ್ಳಿ : ಹಿಜಾಬ್ಗಾಗಿ ವಿದ್ಯಾರ್ಥಿನಿಯರ ಪ್ರತಿಭಟನೆ-ಕಾಲೇಜಿಗೆ ರಜಾ ಘೋಷಣೆ