ಕೊಪ್ಪಳ: ಗಮನ ಬೇರೆಡೆಗೆ ಸೆಳೆದು ಹಣ ದೋಚುವ ಗ್ಯಾಂಗ್ ಒಂದು ಕೊಪ್ಪಳ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ವರಿಕೆಯಿಂದ ಇರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರಿಧರ್ ಮನವಿ ಮಾಡಿದ್ದಾರೆ.
ನಗರದ ಕೆನರಾ ಬ್ಯಾಂಕ್ನಲ್ಲಿ ದಂಪತಿ ಮೂರು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿರುವಾಗ ಆ ಗ್ಯಾಂಗ್ ಅವರ ಗಮನ ಬೇರೆಡೆಗೆ ಸೆಳೆದು ಹಣವನ್ನು ದೋಚಿಕೊಂಡು ಪರಾರಿಯಾಗಿತ್ತು. ಈ ಗ್ಯಾಂಗ್ ತಮಿಳುನಾಡಿನಿಂದ ಬಂದಿದೆ.
ಬೈಕ್ ತೆಗೆದುಕೊಂಡು ಬಂದು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮುಂದೆ ಹೊಂಚು ಹಾಕಿಕೊಂಡು ಇರುತ್ತಾರೆ. ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಂದ ಹಣ ಡ್ರಾ ಮಾಡಿಕೊಂಡು ಬರುವ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ದೋಚಿಕೊಂಡು ಪರಾರಿಯಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಗರದಲ್ಲಿ ಜುಲೈ 19 ರಂದು ಇಂತಹ ಒಂದು ಘಟನೆ ನಡೆದಿದೆ. ಹಣ ದೋಚಿರುವ ಗ್ಯಾಂಗ್ನ ಸಿಸಿಟಿವಿ ದೃಶ್ಯಾವಳಿ ಹಾಗೂ ಫೋಟೋಗಳನ್ನು ನಗರ ಠಾಣೆಯ ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ಹಣ ದೋಚುವ ಈ ಗ್ಯಾಂಗ್ ಸಕ್ರಿಯವಾಗಿರುವ ಕುರಿತು ಈಗಾಗಲೇ ಅಕ್ಕಪಕ್ಕದ ಜಿಲ್ಲೆಗಳಿಗೂ ಮಾಹಿತಿ ನೀಡಲಾಗಿದೆ. ಗ್ಯಾಂಗ್ ಕುರಿತು ಮಾಹಿತಿ ಕಲೆ ಹಾಕಲಾಗಿದ್ದು, ಶೀಘ್ರದಲ್ಲಿಯೇ ಈ ಗ್ಯಾಂಗ್ ಪತ್ತೆ ಮಾಡಿ ಬಂಧಿಸಲಾಗುತ್ತದೆ.
ಇದನ್ನೂ ಓದಿ: ರೈಲ್ವೆ ಪೊಲೀಸರಿಗೆ ವಿಸಿಟಿಂಗ್ ಕಾರ್ಡ್: ಅಪರಾಧ ನಿಯಂತ್ರಿಸಲು ಪ್ರಯಾಣಿಕರಿಗೆ ಕಾರ್ಡ್ ವಿತರಣೆ
ಹೀಗಾಗಿ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.