ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡು ಬಿಡ್ತಾರೋ ಏನೋ ಎಂದು ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ನಗರದಲ್ಲಿರುವ ಸಂಸದ ಸಂಗಣ್ಣ ಕರಡಿ ನಿವಾಸದಲ್ಲಿ ಮಾತನಾಡಿದ ಅವರು, ಡಿಕೆಶಿ ಹೇಗಿದ್ದಾರೆ ಎಂದರೆ ಯಡಿಯೂರಪ್ಪ ಅವರನ್ನು ಮುಂದೆ ಕಂಡರೆ ಹೊಗಳುತ್ತಾರೆ. ಮೊನ್ನೆ ಯಡಿಯೂರಪ್ಪ ಅವರಿಗೆ 10 ಬಾರಿ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದರು. ಹೊರಗೆ ಬಂದು ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ಟೀಕಿಸಿದರು ಎಂದು ಹೇಳಿದರು. ಟೀಕೆ ಮಾಡದಿದ್ರೆ ಎಲ್ಲಿ ತಮ್ಮ ಅಧ್ಯಕ್ಷ ಸ್ಥಾನ ಕಿತ್ತುಕೊಂಡು ಬಿಡುತ್ತಾರೋ ಎಂದು ಬಿಜೆಪಿ ಸರ್ಕಾರವನ್ನು ಅವರು ಟೀಕಿಸುತ್ತಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರಿಗೆ ಅರಿವು ಕಡಿಮೆ ಇದೆ. 130 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡಿರುವುದಕ್ಕೆ ನಮ್ಮ ಸರ್ಕಾರವನ್ನು ಅವರು ಹೊಗಳಬೇಕು. ನಮ್ಮ ಸರ್ಕಾರವಿರುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ದೂಷಣೆ ಮಾಡ್ತಿದ್ದಾರೆ ಎಂದು ಹೇಳಿದರು.
ಇನ್ನು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಸ್ಗಳನ್ನು ರಸ್ತೆಗಿಳಿಸದೆ ನಿಲ್ಲಿಸಿದ್ದು ಇದೇ ಮೊದಲು. ಕೊರೊನಾ ಸೋಂಕು ಹರಡುವ ಭೀತಿಯ ಕಾರಣದಿಂದ ಬಸ್ ನಿಲ್ಲಿಸುವ ಪರಿಸ್ಥಿತಿ ಬಂದಿತು. ಇದೀಗ ಬಸ್ಗಳ ಸಂಚಾರವನ್ನು ಮತ್ತೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದರು.
ಇನ್ನು ಲಾಕ್ಡೌನ್ ಸಡಿಲಿಕೆಯಾದ ಬಳಿಕ ಕೊರೊನಾ ಕೇಸ್ಗಳು ಜಾಸ್ತಿಯಾಗಿವೆ. ಲಾಕ್ಡೌನ್ ಮುಕ್ತವಾಗಿಲ್ಲ ಹಾಗೂ ಕೊರೊನಾ ಸಹ ಮುಕ್ತಾಯವಾಗಿಲ್ಲ ಎಂದರು. ಕೊರೊನಾ ಜೊತೆ ಬದುಕುವುದನ್ನು ನಾವು ಕಲಿಯಬೇಕಿದೆ. ಜನರು ಸಹಕಾರ ನೀಡಬೇಕು ಎಂದರು. ಸರ್ಕಾರ ನೌಕರರಿಗೆ ಸಂಬಳ, ಬಿಲ್ ಕೊಡದಷ್ಟು ಕೆಳಮಟ್ಟಕ್ಕೆ ಹೋಗಿಲ್ಲ. ನೌಕರರ ಸಂಬಳ, ಬಿಲ್ ಕೊಡುವ ತಾಕತ್ತು ಸರ್ಕಾರಕ್ಕಿದೆ ಎಂದರು. ಇನ್ನು ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡುವುದಲ್ಲ. ನಮ್ಮ ಮೇಲೆ ಆರೋಪಗಳಿದ್ದರೆ ಅದನ್ನು ಬರೆದು ಕೊಡಲಿ. ಅದಲ್ಲದೆ ಕುಮಾರಸ್ವಾಮಿ ಹೇಳಿದ್ದು ವೇದ ವಾಕ್ಯವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.