ಮುಂಬೈ: 2008ರ ಮಾಲೆಗಾಂವ್ ಸ್ಫೋಟದ ಘಟನೆ ಆಧರಿಸಿದ 'ಮ್ಯಾಚ್ ಫಿಕ್ಸಿಂಗ್ - ದಿ ನೇಷನ್ ಅಟ್ ಸ್ಟೇಕ್' (Match Fixing - The Nation at Stake) ಚಿತ್ರದ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಪಿ.ಕೊಲಾಬಾವಾಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
ಚಿತ್ರವು ಕೇಸರಿ ಭಯೋತ್ಪಾದನೆಯನ್ನು ಬಿಂಬಿಸುತ್ತದೆ ಎಂದು ಪುರೋಹಿತ್ ಅವರ ವಕೀಲರು ವಾದಿಸಿದರು. ನವೆಂಬರ್ 15 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ತನ್ನ ವರ್ಚಸ್ಸನ್ನು ಹಾಳುಮಾಡುವಂತಿದೆ ಎಂದು ಪುರೋಹಿತ್ ಹೇಳಿದ್ದಾರೆ. ಆದರೆ, ಇದು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕವೊಂದನ್ನು ಆಧರಿಸಿದ ಕಾಲ್ಪನಿಕ ಕೃತಿ ಎಂದು ಚಿತ್ರದ ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದರು.
ಚಿತ್ರದ ಆರಂಭದಲ್ಲಿ ಪ್ರದರ್ಶಿಸಲಾಗುವ ಹಕ್ಕು ನಿರಾಕರಣೆಯನ್ನು ಸಹ ನಿರ್ಮಾಪಕರು ನ್ಯಾಯಾಲಯದ ಮುಂದೆ ಮಂಡಿಸಿದರು. ಚಿತ್ರವು ಕಾಲ್ಪನಿಕ ಕೃತಿಯಾಗಿದೆ ಮತ್ತು ಸತ್ತ ಅಥವಾ ಜೀವಂತವಾಗಿರುವ ಯಾವುದೇ ವ್ಯಕ್ತಿಗೆ ಚಿತ್ರದಲ್ಲಿ ಯಾವುದೇ ಹೋಲಿಕೆ ಇಲ್ಲ ಎಂದು ಹಕ್ಕು ನಿರಾಕರಣೆಯಲ್ಲಿ ಹೇಳಲಾಗಿದೆ.
ವಾದಗಳನ್ನು ಸಂಕ್ಷಿಪ್ತವಾಗಿ ಆಲಿಸಿದ ನಂತರ, ನ್ಯಾಯಪೀಠವು ಹಕ್ಕು ನಿರಾಕರಣೆ ಪಠ್ಯದಲ್ಲಿ ಕೆಲ ಸಣ್ಣ ಬದಲಾವಣೆ ಮಾಡುವಂತೆ ಸೂಚಿಸಿತು. ಇದಕ್ಕೆ ನಿರ್ಮಾಪಕರು ಒಪ್ಪಿಕೊಂಡರು.
"ಅರ್ಜಿದಾರರು ಆತಂಕ ಪಡಲು ಆಧಾರಗಳಿವೆ ಎಂದು ಅನಿಸುತ್ತಿಲ್ಲ. ಈ ಚಲನಚಿತ್ರವು ಕಾಲ್ಪನಿಕ ಕತೆ ಆಧರಿಸಿದೆ. ಹೀಗಾಗಿ ಅಂತಿಮ ವಾದಗಳ ಹಂತದಲ್ಲಿರುವ ವಿಚಾರಣೆಯ ಮೇಲೆ ಪರಿಣಾಮವಾಗಬಹುದು ಎಂಬ ಆತಂಕವಿಲ್ಲ" ಎಂದು ನ್ಯಾಯಾಲಯ ಹೇಳಿದೆ. "ಅರ್ಜಿದಾರರು ತಪ್ಪು ಗ್ರಹಿಕೆಗಳಿಂದ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿತು.
ಭಾರತದ ನ್ಯಾಯಾಧೀಶರು ಇಂತಹ ಚಲನಚಿತ್ರಗಳಿಂದ ಪ್ರಭಾವಿತರಾಗಬಹುದು ಎಂದು ನೀವು ಭಾವಿಸುವಿರಾ ಎಂದು ನ್ಯಾಯಾಲಯ ಪುರೋಹಿತ್ ಅವರನ್ನು ಪ್ರಶ್ನಿಸಿತು.
ಏತನ್ಮಧ್ಯೆ, ಮುಸ್ಲಿಮರ ಭಾವನೆಗಳನ್ನು ನೋಯಿಸುತ್ತದೆ ಎಂಬ ಆಧಾರದ ಮೇಲೆ ಚಿತ್ರದ ಬಿಡುಗಡೆಗೆ ತಡೆ ಕೋರಿ ನದೀಮ್ ಖಾನ್ ಎಂಬವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಗುರುವಾರ ಹಿಂತೆಗೆದುಕೊಳ್ಳಲಾಯಿತು. 2008ರ ಸೆಪ್ಟೆಂಬರ್ 29ರಂದು ಮುಂಬೈನಿಂದ 200 ಕಿ.ಮೀ ದೂರದಲ್ಲಿರುವ ಉತ್ತರ ಮಹಾರಾಷ್ಟ್ರದ ಮಾಲೆಗಾಂವ್ ನ ಮಸೀದಿಯೊಂದರ ಬಳಿ ಮೋಟಾರ್ ಸೈಕಲ್ ಗೆ ಕಟ್ಟಿದ್ದ ಬಾಂಬ್ ಸ್ಫೋಟಗೊಂಡು ಆರು ಜನ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ : ದೆಹಲಿ ಗಾಳಿ ಕಲುಷಿತ ತಡೆ ಕೋರಿ ಅರ್ಜಿ; ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್