ಕೊಪ್ಪಳ : ಕೇಂದ್ರ ಸರ್ಕಾರದಿಂದ ಅನುದಾನ ತರಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಧಮ್ ಇಲ್ಲವೆಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಟಾಂಗ್ ನೀಡಿದ್ದಾರೆ. ಇದು ಧಮ್ಮು, ಕೆಮ್ಮು ಪರೀಕ್ಷೆ ಮಾಡುವ ಸಮಯವಲ್ಲ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಮ್ಮ ಪಾಲು ನಮಗೆ ಕೊಟ್ಟಿದೆ. ಇದರಲ್ಲಿ ಧಮ್ ತೋರಿಸುವಂತಹದ್ದೇನಿದೆ?. ಧಮ್ಮಿಲ್ಲ, ಅದಿಲ್ಲ ಇದಿಲ್ಲ ಎನ್ನುವುದು ಇವೆಲ್ಲ ಯಾವ ಭಾಷೆ ಎಂದು ಪ್ರಶ್ನಿಸಿದರು.
ಸಿಎಂ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ರೂ ಸಹ ದಿನಕ್ಕೆ ಹತ್ತರಿಂದ ಹದಿನೈದು ಸಭೆಗಳನ್ನು ಮಾಡ್ತಾರೆ. ಹೊರ ರಾಜ್ಯದಿಂದ ಜನರು ಬರದೆ ಇದ್ದಿದ್ದರೆ, ನಮ್ಮ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಇರುತ್ತಿರಲಿಲ್ಲ ಎಂದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ವಿರೋಧ ಮಾಡುವುದೇ ಅವರ ಕೆಲಸ. ವಿರೋಧ ಮಾಡುವುದೇ ತಮ್ಮ ಆದ್ಯ ಕರ್ತವ್ಯ ಎಂದುಕೊಂಡಿದ್ದಾರೆ. ಹಾಗೆಂದು ಎಲ್ಲದನ್ನೂ ವಿರೋಧಿಸಬಾರದು ಎಂದರು.
ಇದನ್ನು ಓದಿ: ಮೋದಿ ಕಂಡ್ರೆ ಯಡಿಯೂರಪ್ಪ ಡ್ಯಾನ್ಸಿಂಗ್ ಮಾಡ್ತಾರೆ, ಸಿಎಂಗೆ ಧಮ್ ಇಲ್ಲ.. ಸಿದ್ದರಾಮಯ್ಯ ಲೇವಡಿ
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ವಿಚಾರದ ಕುರಿತು ಮಾತನಾಡಿ ಅವರು, ಬದುಕು ಬಹಳ ಮುಖ್ಯ. ಸರ್ಕಾರ ಎಲ್ಲಾ ಯೋಚನೆ ಮಾಡಿಯೇ ಈ ನಿರ್ಧಾರ ಮಾಡಿದೆ. ಬಡವರಿಗೆ ಹೊರೆಯಾದ್ರೆ ಸರ್ಕಾರ ಮತ್ತೆ ಯೋಚನೆ ಮಾಡುತ್ತದೆ ಎಂದರು. ಚಿಕಿತ್ಸೆಯ ದರ ಹೆಚ್ಚಾಗುತ್ತದೆ ಎಂದು ನಾವು ಜೀವನ ಕಳೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು.
ಇದರಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳ ಲಾಬಿಯಿಲ್ಲ. ಖಾಸಗಿ ಆಸ್ಪತ್ರೆಯವರು ಕೊರೊನಾ ರೋಗಿ ಕೊಡಿ ಎಂದು ಕೇಳಿಲ್ಲ. ರಾಜ್ಯದಲ್ಲಿ ಸೋಂಕಿತರು ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ದರ ನಿಗದಿ ಮಾಡಿದ್ದಾರೆ. ಯಾಕೆಂದರೆ, ಖಾಸಗಿ ಆಸ್ಪತ್ರೆಯವರು ತಮ್ಮ ಸಿಬ್ಬಂದಿಗೆ ಸಂಬಳ ಕೊಡಬೇಕು. ಹೀಗಾಗಿ ದರ ನಿಗದಿ ಮಾಡಿದ್ದಾರೆ. ದರ ಹೆಚ್ಚಾದ್ರೆ ಸರ್ಕಾರ ಮತ್ತೆ ಯೋಚನೆ ಮಾಡಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಇದನ್ನು ಓದಿ: ಲಾಟರಿ ಹೊಡೆದು ಸಿಎಂ ಆದ ಸಿದ್ದುಗೆ 'ಧಮ್' ಅನ್ನೋಕೆ ಯೋಗ್ಯತೆಯಿಲ್ಲ.. ಸಚಿವ ಕೆಎಸ್‌ಈ ವಾಗ್ದಾಳಿ
ಕೆಲ ಬಿಜೆಪಿ ಶಾಸಕರಿಂದ ಬಿಜೆಪಿ ರಾಜ್ಯಾಧ್ಯಕ್ಷ ಭೇಟಿ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರವರ ವೈಯಕ್ತಿಯ ಅಭಿಪ್ರಾಯ. ಕ್ಷೇತ್ರಕ್ಕೆ ಅನುದಾನ ಬರದಿದ್ದರೆ ಪತ್ರ ಬರೆದರೆ ತಪ್ಪೇನು ಎಂದು ಪ್ರಶ್ನಿಸಿದರು. ಹೆಚ್. ವಿಶ್ವನಾಥ್ ವಿರುದ್ಧ ಸಾ ರಾ ಮಹೇಶ್ ಆರೋಪ ವಿಚಾರದು ಕುರಿತು ಮಾತನಾಡಿ, ಹೆಚ್. ವಿಶ್ವನಾಥ ಬಹಳ ಬುದ್ಧಿವಂತರಿದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.