ಕೊಪ್ಪಳ: ಸಚಿವ ಹಾಲಪ್ಪ ಆಚಾರ್ ಅವರನ್ನು ಬೆಳೆಸಿದ್ದೇ ನಾನು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಾಗ್ದಾಳಿ ನಡೆಸಿದರು. ಜಿಲ್ಲೆಯ ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ನಡೆದ ಪಟ್ಟಣ ಪಂಚಾಯತ್ನ ನೂತನ ಕಾಂಗ್ರೆಸ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಚಿವ ಹಾಲಪ್ಪ ಆಚಾರ್ ಅವರನ್ನು ಬೆಳೆಸಿದ್ದು ನಾನೇ. ವಿರೋಧದ ನಡುವೆಯೇ ಹಾಲಪ್ಪರನ್ನು ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದೆವು.
ನನಗೆ ಸಹಕಾರ ಕ್ಷೇತ್ರದಲ್ಲಿ ಅನುಭವವಿರಲಿಲ್ಲ. ಹೀಗಾಗಿ ಹಾಲಪ್ಪ ಆಚಾರ್ರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಂದು ಸಚಿವರಾಗಿದ್ದ ಎಂ.ಎಸ್ ಪಾಟೀಲ, ಮುನಿಯಪ್ಪ ಮುದ್ದಪ್ಪ, ಸಾಲೋಣಿ ನಾಗಪ್ಪ ಹಾಗೂ ಶಾಸಕರಾಗಿದ್ದ ಸಂಗಣ್ಣ ಕರಡಿ, ಅಮರೇಗೌಡ ಇದನ್ನು ವಿರೋಧಿಸಿದ್ದರು. ಈ ವಿರೋಧದ ಮಧ್ಯೆಯೂ ಹಾಲಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅಂದಿನ ಸಹಕಾರ ಸಚಿವ ಎಸ್.ಎಸ್ ಪಾಟೀಲ, ಸಿಂಧನೂರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರು ಸಾಥ್ ನೀಡಿದ್ದರು. ಆದರೆ ಒಮ್ಮೆಯೂ ಹಾಲಪ್ಪ ಆಚಾರ್, ನಮ್ಮ ಮೂವರ ಹೆಸರು ಹೇಳುತ್ತಿಲ್ಲ. ಒಳ್ಳೆಯದು ಮಾಡುವವರು ಸಮಾಜ ಸೇವೆ ಮಾಡಬೇಕು ಎಂದರು.
ಇಂದಿನ ರಾಜಕೀಯ ವ್ಯವಸ್ಥೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ರಾಜಕೀಯ ವ್ಯವಸ್ಥೆ ಹಾಗೂ ನಾಯಕರು ಕೆಟ್ಟಿದೆಯೇ ಹೊರತು ಜನ ಕೆಟ್ಟಿಲ್ಲ. ಪಾರ್ಲಿಮೆಂಟ್, ವಿಧಾನಸಭೆ ಸಹ ಕೆಟ್ಟಿದೆ. ಹಣ, ಜಾತಿಯಿಂದ ವ್ಯವಸ್ಥೆ ಹಾಳಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ