ಗಂಗಾವತಿ: ಅಣ್ಣ ನಿಮ್ಮ ಹತ್ತಿರ ಮಾತಡಬೇಕು. ಎಲ್ಲರೂ ಬೇಡಿಕೆ ಇಡುತ್ತಿದ್ದಾರೆ. ನೀವು ಹೇಳಿದರೆ ನಮ್ಮ ಜಿಲ್ಲೆಯಿಂದ ಐದಾರು ಜನ ಪ್ರಮುಖರನ್ನು ಕರ್ಕೊಂಡು ಬರ್ತೀನಿ. ನೀವು ಟೈಂ ಕೊಡಿ ಅಣ್ಣ ಎಂದು ಶಾಸಕ ಬಸವರಾಜ ದಡೇಸಗೂರು ಸಚಿವ ಶ್ರೀರಾಮುಲುಗೆ ಕರೆ ಮಾಡಿ ಮನವಿ ಮಾಡಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಉನ್ನತ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಹಲವು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿ ಬಹು ದಿನಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸಗೂರು ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಶಾಸಕ ಬಸವರಾಜ್, ಆರೋಗ್ಯ ಸಚಿವ ಶ್ರೀರಾಮುಲುಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಶಾಸಕರಿಗೆ ಸ್ಪಂದಿಸಿದ ರಾಮುಲು, ಮೂರು ತಿಂಗಳು ವೇಟ್ ಮಾಡಲು ಹೇಳು. ವೇತನ ಜಾಸ್ತಿ ಮಾಡ್ತೇವೆ. ಕೆಲಸ ಕಾಯಂ ಮಾಡುತ್ತೇವೆ. ಇದಕ್ಕಾಗಿಯೇ ಒಬ್ಬ ಐಎಎಸ್ ಅಧಿಕಾರಿಯನ್ನು ನಿಯೋಜಿಸಿ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.