ಕೊಪ್ಪಳ: ಬಸನಗೌಡ ಪಾಟೀಲ ಯತ್ನಾಳ್ಗೆ ನನ್ನ ಮೇಲೆ ಮೊದಲಿನಿಂದಲೂ ಬಹಳ ಪ್ರೀತಿ ಇದೆ, ಅವರು ಬಹಳ ಹಿರಿಯರಿದ್ದಾರೆ. ಹೀಗಾಗಿ ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಬಳಿಕ, ಬಸವನಗೌಡ ಪಾಟೀಲ್ ಯತ್ನಾಳ್ ನಿಮ್ಮ ಕುಟುಂಬದ ಬಗ್ಗೆ ಪತ್ರ ಬರೆದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ತುಂಬಾ ಸಂತೋಷ. ದೆಹಲಿ ನಾಯಕರು ಇದನ್ನು ಗಮನಿಸುತ್ತಾರೆ ಎಂದು ಹೇಳಿದರು.
ಮೀಸಲಾತಿ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿಲ್ಲ
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಕ್ಕೆ ಸಿಎಂ ಹಾಗೂ ಬಿಜೆಪಿ ನಾಯಕರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಹೋರಾಟ ಸಹಜ. ಸಂವಿಧಾನದ ಅಡಿಯಲ್ಲಿ ಯಾವ ರೀತಿ ಪರಿಹಾರ ಕೊಡಬೇಕು ಅದನ್ನು ಸಿಎಂ ಕೊಡುತ್ತಾರೆ. ಅಲ್ಲದೆ, ಮುಂಬರುವ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ರಾಮಮಂದಿರ ವಿಚಾರ ವಿವಾದಿತ ಅನ್ನುವುದು ಆಶ್ಚರ್ಯ
ರಾಮಮಂದಿರ ವಿಚಾರದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಯಾರಾದರೂ ಅವಿದ್ಯಾವಂತರು ಮಾತನಾಡಿದರೆ ಉತ್ತರ ಕೊಡಬಹುದಿತ್ತು. ವಿದ್ಯಾವಂತರಾಗಿ ಈ ರೀತಿ ಮಾತಾಡಿದರೆ ಹೇಗೆ ಉತ್ತರ ಕೊಡುವುದು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಮಮಂದಿರ ವಿಚಾರ ವಿವಾದಿತ ಅನ್ನುವುದು ಆಶ್ಚರ್ಯ. ಇಂತಹ ವಿಷಯದಲ್ಲಿ ರಾಜಕೀಯ ಮಾಡಿ ಮತದಾರರನ್ನು ಅಡ್ಡದಾರಿಗೆ ತೆಗದುಕೊಂಡು ಹೋಗಿದ್ದಕ್ಕೆ ಕಾಂಗ್ರೆಸ್ಗೆ ಈ ಗತಿ ಬಂದಿದೆ. ಇನ್ನಾದರೂ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಚಾಟಿ ಬೀಸಿದರು.