ಕೊಪ್ಪಳ : ಮಾಸಿಕ 12 ಸಾವಿರ ರೂ. ವೇತನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿತು. ಆಶಾ ಕಾರ್ಯಕರ್ತೆಯರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ ಹಾಗೂ ಜನ ಸಮೂಹದ ಮಧ್ಯೆ ಸಂಪರ್ಕ ಸೇತುವೆಯಾಗಿ ರಾಜ್ಯದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ನೀಡುವ ಸಂಭಾವನೆ ಅತ್ಯಂತ ಕಡಿಮೆ ಇದೆ. ಕೆಲಸಕ್ಕೆ ತಕ್ಕ ವೇತನ ನೀಡದೆ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ. ಈ ಬಗ್ಗೆ ಈಗಾಗಲೇ ಹೋರಾಟದ ಮೂಲಕ ಸರ್ಕಾರಕ್ಕೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಸಹ ಸರ್ಕಾರ ಆಶಾ ಕಾರ್ಯಕರ್ತೆಯರ ನೆರವಿಗೆ ಬಂದಿಲ್ಲ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ನೀಡುವ ₹4000 ಹಾಗೂ ಕೇಂದ್ರ ಸರ್ಕಾರದಿಂದ ಚಟುವಟಿಕೆಗಳನ್ನಾಧರಿಸಿ ಡುವ ಸುಮಾರು 5 ರಿಂದ 6 ಸಾವಿರ ರೂ. ಪ್ರೋತ್ಸಾಹಧನ. ಈ ಎರಡೂ ಸೇರಿ ಸುಮಾರು 10 ಸಾವಿರ ರೂಪಾಯಿ ಪಡೆಯುವ ಯೋಜನೆ ಇದೆ. ಆದರೆ, ಇದು ಸರಿಯಾಗಿ ನಮಗೆ ತಲುಪುತ್ತಿಲ್ಲ. ಈ ಎರಡೂ ಗೌರವಧನ ಸೇರಿಸಿ ಒಟ್ಟಾರೆ ಮಾಸಿಕ 12 ಸಾವಿರ ರೂ. ನಿಗದಿಪಡಿಸಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರೂ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಲೇ ಇದ್ದಾರೆ. ಬಾಕಿ ಇರುವ ಪ್ರೋತ್ಸಾಹ ಧನ ಹಾಗೂ ಜನರ ಆರೋಗ್ಯ ತಪಾಸಣೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಸಾಮಗ್ರಿ ಒದಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.