ಕೊಪ್ಪಳ: ಹನುಮನ ಜನ್ಮ ಸ್ಥಳವಾಗಿರುವ ಅಂಜನಾದ್ರಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಆಂಜನೇಯಸ್ವಾಮಿಯ ಹಲವು ದೇವಸ್ಥಾನಗಳು ಇವೆ. ಈ ಎಲ್ಲ ದೇವಸ್ಥಾನಗಳು ಒಂದೊಂದು ಕಾರಣಕ್ಕೆ ವಿಶೇಷ ಎನಿಸುತ್ತವೆ. ಅದರಲ್ಲಿ ಜಿಲ್ಲೆಯ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನ ವಿಶೇಷತೆಯಿಂದ ಕೂಡಿದೆ. ಹನುಮನ ಬಹಳಷ್ಟು ದೇವಸ್ಥಾನ ದಕ್ಷಿಣಾಭಿಮುಖವಾಗಿ ಇರುತ್ತವೆ. ಈ ದಿಕ್ಕನ್ನು ಸಾಮಾನ್ಯವಾಗಿ ಜನರು ಹನುಮನದಿಕ್ಕು ಎಂದು ಕರೆಯುವುದುಂಟು. ಆದರೆ ಮಸಬಹಂಚಿನಾಳ ಗ್ರಾಮದಲ್ಲಿರುವ ಮಾರುತೇಶ್ವರ ದೇವಸ್ಥಾನ ಪಶ್ಚಿಮಾಭಿಮುಖವಾಗಿ ಇದೆ.
ಈ ದೇವಸ್ಥಾನ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಅಲ್ಲದೆ ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾನ ಮಾಡಿರುವುದರ ಹಿಂದೆ ಒಂದು ರೋಚಕವಾದ ಕಥೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಮದನಹಂಚಿನಾಳ ಗ್ರಾಮದ ಮೂಲಕ ಮುಂದಿನ ಗ್ರಾಮದಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಲು ವಾಹನವೊಂದರಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಆಗ ಮಸಬಹಂಚಿನಾಳ ಗ್ರಾಮದ ಬಳಿ ಆ ವಾಹನದ ಇರಿಸು ಮುರಿದು ಅಲ್ಲಿಯೇ ನಿಂತಿತು. ಹೀಗಾಗಿ ಜನರು ಆ ಮೂರ್ತಿಯನ್ನು ಮಸಬಹಂಚಿನಾಳ ಗ್ರಾಮದಲ್ಲಿಯೇ ಪ್ರತಿಷ್ಠಾಪಿಸಿದರು. ಮೂರ್ತಿ ಪಶ್ಚಿಮಾಭಿಮುಖವಾಗಿ ಇದ್ದುದ್ದರಿಂದ ಹಾಗೆಯೇ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಸ್ಥಳೀಯರು ಹೇಳುತ್ತಾರೆ.
ಓದಿ:ಭಾರತೀಯ ಮಕ್ಕಳ ತಜ್ಞರ ರಾಜ್ಯ ಘಟಕಕ್ಕೆ ಗಂಗಾವತಿ ಯುವ ವೈದ್ಯ ಆಯ್ಕೆ
ಭಕ್ತರು ಇಲ್ಲಿ ಏನನ್ನೇ ಬೇಡಿಕೊಂಡರೂ ಈಡೇರುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆಯಾಗಿದೆ. ಹೀಗಾಗಿ ಬೇರೆ ಬೇರೆ ಕಡೆಯಿಂದ ಜನರು ಈ ದೇವಸ್ಥಾನಕ್ಕೆ ಬರುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗಪ್ಪ. ಇನ್ನು ಇಲ್ಲಿನ ಆಂಜನೇಯಸ್ವಾಮಿ ರಾತ್ರಿ ವೇಳೆಯಲ್ಲಿ ಊರಿನ ಸೀಮೆಯಲ್ಲಿ ಸಂಚಾರ ಮಾಡಿ ಬರುತ್ತಾನೆ ಎಂಬ ನಂಬಿಕೆ ಗ್ರಾಮಸ್ಥರದು. ವರ್ಷದಲ್ಲಿ ಎರಡು ಜೊತೆ ದೊಡ್ಡ ಗಾತ್ರದ ಪಾದರಕ್ಷೆಗಳನ್ನು ಮಾಡಿಸಿಡಲಾಗುತ್ತದೆ. ಆ ಪಾದರಕ್ಷೆಗಳು ಸವೆದಿರುತ್ತವೆ. ಆಂಜನೇಯಸ್ವಾಮಿ ಗ್ರಾಮದ ಸೀಮೆಯಲ್ಲಿ ನಿತ್ಯವೂ ಸಂಚಾರ ಮಾಡುತ್ತಾರೆ ಎಂಬುದಕ್ಕೆ ಪಾದರಕ್ಷೆಗಳು ಸವೆಯುವುದೇ ಸಾಕ್ಷಿ ಎನ್ನುತ್ತಾರೆ ಸ್ಥಳೀಯ ಯುವಕ ವೀರಣ್ಣ ಮೂಲಿಮನಿ.