ಕುಷ್ಟಗಿ (ಕೊಪ್ಪಳ): ಅಂಗನವಾಡಿ ಕಾರ್ಯಕರ್ತೆಯರಿಗೆ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಅಂಗನವಾಡಿ ನೌಕರರ ಸಂಘದಿಂದ ಸಿಡಿಪಿಓ ಜಯಶ್ರೀ ರಾಜಪುರೋಹಿತ ಅವರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಮೂರನೇ ದಿನವಾದ ಇಂದು ಸಿಡಿಪಿಓ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಕಲಾವತಿ ಮೆಣೆದಾಳ ಅವರು, ಕೋವಿಡ್-19 ನಿಯಂತ್ರಣ ಕೆಲಸದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ತಾರತಮ್ಯವಿಲ್ಲದೆ 50 ಲಕ್ಷ ರೂ. ವಿಮಾ ಪರಿಹಾರ ನೀಡಬೇಕು. 25 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿದರು.
ಸದ್ಯ ಗುಣಮಟ್ಟದ ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಸಹ ನೀಡಲಾಗಿಲ್ಲ. ಅಗತ್ಯ ವಸ್ತುಗಳು ಇಲ್ಲದಿರುವುದರಿಂದ ರಾಜ್ಯದಲ್ಲಿ ಕೆಲವೆಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೋಂಕು ವಕ್ಕರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹೋರಾಟ ಜುಲೈ 17ರವರೆಗೆ ನಡೆಯಲಿದೆ ಎಂದರು.