ಗಂಗಾವತಿ: ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸೋದ್ಯಮ ತಾಣ ಆನೆಗೊಂದಿಗೆ ಅಮೆರಿಕದ ರಾಯಭಾರಿ ಕೆನೆತ್ ಜಸ್ಟರ್ ಅವರು ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.
ಹೊಸಪೇಟೆ ಮೂಲಕ ಸ್ನೇಹಿತರೊಂದಿಗೆ ಆನೆಗೊಂದಿಗೆ ಬಂದಿದ್ದ ಜಸ್ಟರ್ ಮೊದಲಿಗೆ ಪಂಪಾ ಸರೋವರ, ಅಂಜನಾದ್ರಿ ಪರ್ವತ, ಆದಿಶಕ್ತಿ ದೇಗುಲಕ್ಕೆ ಭೇಟಿ ನೀಡಿದರು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.
ಬಳಿಕ ಆನೆಗೊಂದಿಗೆ ಆಗಮಿಸಿ ಗಗನ್ ಮಹಲ್ ವೀಕ್ಷಿಸಿದರು. ಅವರಿಗೆ ಹಂಪಿ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭದ್ರತೆ ನೀಡಿದ್ದರು. ಮೂರು ದಿನಗಳ ಹಂಪಿ ಮತ್ತು ಆನೆಗೊಂದಿ ಭೇಟಿಗೆ ಅವರು ಇಲ್ಲಿಗೆ ಆಗಮಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆನೆಗೊಂದಿಯ ರಾಜವಂಶಸ್ಥ ಕೃಷ್ಣದೇವರಾಯ ಅವರ ನಿವಾಸಕ್ಕೆ ಭೇಟಿ ನೀಡಿದ ಜಸ್ಟರ್, ಪ್ರಾಚೀನ ಶೈಲಿಯಲ್ಲಿ ಮನೆ ನಿರ್ಮಿಸಿದ್ದನ್ನು ಕಂಡು ಪ್ರಶಂಸಿದರು.