ಗಂಗಾವತಿ: ನಗರಸಭೆ ಕಸ ಸಂಗ್ರಹಿಸುವ ವಾಹನ ಮಾಡಿದ ಯಡವಟ್ಟಿನಿಂದ ಬೆಳ್ಳಂಬೆಳಗ್ಗೆ ನಗರದಲ್ಲಿ ಜನರು ಬೆಚ್ಚಿ ಬಿದ್ದಿದ್ದರು.
ಬೆಳ್ಳಂಬೆಳಗ್ಗೆ ಎಲ್ಲರ ಮನೆಗಳ ಮುಂದೆ ಒಂದೆ ಆ್ಯಂಬುಲೆನ್ಸ್ ಸೈರನ್ ಮೊಳಗತೊಡಗಿತ್ತು. ಯಾರಿಗೆ ಏನಾಗಿದೆ, ಅಕ್ಕಪಕ್ಕದ ಮನೆಯಲ್ಲಿ ಯಾರಿಗಾದರೂ ದಿಢೀರ್ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಾಗಿದೆಯಾ ಎಂದು ಜನ ಆತಂಕದಿಂದ ಹೊರಗೆ ಓಡೋಡಿ ಬಂದು ನೋಡಿದ್ದಾರೆ.
ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ನಗರಸಭೆ ಮಾಡಿದ ಯಡವಟ್ಟಿನಿಂದ ಜನ ಬೆಚ್ಚಿ ಬಿದ್ದರು. ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು.
ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ವಾಹನಗಳಲ್ಲಿ ಜನರ ಗಮನ ಸೆಳೆದು ಕಸ ಹಾಕುವಂತೆ ಸಿಗ್ನಲ್ ಕೊಡುವ ಉದ್ದೇಶಕ್ಕೆ ಈ ಮೊದಲು ಪರಿಸರ ಸಾಮಾಜಿಕ ಜಾಗೃತಿ ಹಾಡುಗಳನ್ನು ಹಾಕಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿದ್ದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.