ಕೊಪ್ಪಳ: ಆ ಪುಣ್ಯಾತ್ಮ ಯಡಿಯೂರಪ್ಪನವ್ರು ಸಿಎಂ ಆಗಿ ಇರುವುದರಿಂದಲೇ ನಮ್ಮ ರಾಜ್ಯ ಬಡವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಲೇವಡಿ ಮಾಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾದರೆ ಕೇಂದ್ರ ಸರ್ಕಾರ ಎರಡು ಸಾವಿರ ಕೋಟಿ, ಮೂರು ಸಾವಿರ ಕೋಟಿ ರೂ. ಪರಿಹಾರ ನೀಡುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಅತಿವೃಷ್ಟಿಯಾದರೆ ಪರಿಹಾರ ನೀಡುವುದಿಲ್ಲ. ರಾಜ್ಯದ ಅತಿವೃಷ್ಟಿ ಪೀಡಿತರಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಲು ಬಿಜೆಪಿ ಹೈಕಮಾಂಡ್ ಹಾಗೂ ಸ್ಥಳೀಯ ಲೋಕಮಾಂಡ್ ಸಹ ಪ್ರಯತ್ನಿಸುತ್ತಿದೆ. ಆ ಪುಣ್ಯಾತ್ಮ ಯಡಿಯೂರಪ್ಪನವ್ರು ಇರುವುದರಿಂದಲೇ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದೆ. ಈಗಾಗಲೇ ಬಿಜೆಪಿ ಕೆಟ್ಟು ಹೋಗಿದೆ. ಈ ಹಿಂದೆ ಜನಾರ್ಧನ ರೆಡ್ಡಿ ಹೈದರಾಬಾದ್ಗೆ ಪಕ್ಷವನ್ನು ತೆಗೆದುಕೊಂಡು ಹೋಗಿದ್ದರು. ಈಗ ಸರ್ಕಾರವೇ ಕೆಟ್ಟು ಹೈದರಾಬಾದ್ ಆಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ಇಂದು ಡಬಲ್ ಶೂನ್ಯ:
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿ ರಾಜ್ಯದ ಬಡ ಜನತೆಗೆ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ಎಂದು ಹೇಳಿದ್ದ ಬಿಜೆಪಿ ಇಂದು ಡಬಲ್ ಶೂನ್ಯಕ್ಕೆ ತಲುಪಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.