ಕುಷ್ಟಗಿ (ಕೊಪ್ಪಳ): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದ್ದಾರೆ.
ತಾಲೂಕಿನಲ್ಲಿ ಮಾತನಾಡಿದ ಅವರು, ಕಳೆದ ಜೂನ್ 7ರಂದು ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಲಾಕ್ಡೌನ್ ಕಾರಣವನ್ನು ನೀಡಿದ್ದ ಸರ್ಕಾರ, ಅವಕಾಶ ನಿರಾಕರಿಸಿತ್ತು. ಇದೀಗ ಮತ್ತೆ ಜೂನ್ 14ರಂದು ಕಾರ್ಯಕ್ರಮ ನಿಗದಿಗೊಳಿಸಿದೆ. ಸರ್ಕಾರ ಈ ಕಾರ್ಯಕ್ರಮಕ್ಕೂ ಅವಕಾಶ ಕಲ್ಪಿಸದಿದ್ದರೆ ಉದ್ದೇಶಪೂರ್ವಕವಾಗಿ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಮುಂದುವರೆದು, ಇದರಿಂದ ನಮ್ಮ ಪಕ್ಷಕ್ಕೆ ಏನೂ ಕೆಟ್ಟದಾಗುವುದಿಲ್ಲ. ಇದೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ನಿರಾಕರಣೆ ವಿಷಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವನ್ನು ಗಮನಿಸಿರುವ ಸರ್ಕಾರ ಇನ್ನಾದರೂ ಅವಕಾಶ ಕೊಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ತಿಳಿಸಿದರು.