ಕೊಪ್ಪಳ: ಅಂದುಕೊಂಡಂತೆ ಏತ ನೀರಾವರಿ ಯೋಜನೆ ಕಾಮಗಾರಿ ಮುಗಿದರೆ ಇನ್ನೊಂದು ತಿಂಗಳಲ್ಲಿ ಸುಮಾರು 8000 ಎಕರೆ ಪ್ರದೇಶ ನೀರಾವರಿಯಾಗಲಿದೆ. ಆದರೆ ಈ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಗದೇ ಇರೋದು ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಹೌದು, ಕೊಪ್ಪಳ ತಾಲೂಕಿನ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನೊಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ತಾಲೂಕಿನ ಹನಕುಂಟಿ ಬಳಿಯಿರುವ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ನೀರು ಬಳಸಿಕೊಂಡು ಏತ ನೀರಾವರಿ ಮೂಲಕ ಸುಮಾರು 7 ರಿಂದ 8 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಂಡಿ-ಬೆಟಗೇರಿ ಏತ ನೀರಾವರಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿದೆ.
ಈ ಏತ ನೀರಾವರಿ ಯೋಜನೆಯಿಂದ ತಾಲೂಕಿನ ಅಳವಂಡಿ, ಮೈನಹಳ್ಳಿ, ಬೆಟಗೇರಿ, ಹಂದ್ರಾಳ, ಹಿರೇಸಿಂದೋಗಿ, ಬಿಕನಹಳ್ಳಿ ಹಾಗೂ ಕವಲೂರು ಗ್ರಾಮದ ಭೂಮಿಗಳು ನೀರಾವರಿಗೆ ಒಳಪಡಲಿದೆ. ಈಗಾಗಲೇ ಕಾಮಗಾರಿ ಶೇಕಡಾ 90 ರಷ್ಟು ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮಾತ್ರ ಬಾಕಿ ಉಳಿದುಕೊಂಡಿದೆ.
ರೈತರಿಗಿಲ್ಲ ಪರಿಹಾರ:
ಈ ಕಾಮಗಾರಿ ಇನ್ನೊಂದು ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಲೋಕಾರ್ಪಣೆಗೊಳ್ಳಲಿದೆ. ಆದರೆ ಈ ಪ್ರಾಜೆಕ್ಟಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ಆರಂಭಗೊಂಡಿದೆ. ಸುಮಾರು 50 ಎಕರೆಗೂ ಹೆಚ್ಚು ಭೂಮಿಯನ್ನು ಈ ಪ್ರಾಜೆಕ್ಟ್ಗಾಗಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಮಾತ್ರ ಇನ್ನೂ ಪರಿಹಾರ ನೀಡಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ಸಿಗುವವರೆಗೂ ಕಾಮಗಾರಿ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಭೂಮಿ ಕಳೆದುಕೊಂಡಿರುವ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಿಂದ ರೈತರಿಗೆ ಭರವಸೆ:
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶಾಸಕ ರಾಘವೇಂದ್ರ ಪರಿಶೀಲನೆ ನಡೆಸಿ ಇನ್ನೊಂದು ತಿಂಗಳಲ್ಲಿ ಪ್ರಾಜೆಕ್ಟ್ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ. ಸುಮಾರು ವರ್ಷಗಳ ಹೋರಾಟದ ಫಲವಾಗಿ ಈ ಯೋಜನೆ ಕಾಮಗಾರಿ ಮಾಡಲಾಗಿದೆ. ಇದು ರೈತರಿಗೆ ಅನುಕೂಲವಾಗುವ ಕೆಲಸ ಎಂದರು.
ದೊಡ್ಡ ದೊಡ್ಡ ಪ್ರಾಜೆಕ್ಟ್ಗಳಲ್ಲಿ ಕೆಲ ಸಣ್ಣಪುಟ್ಟ ತೊಂದರೆಗಳು ಆಗೋದು ಸಹಜ. ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ರೈತರಿಗೆ ಪರಿಹಾರ ನೀಡಲು ಈಗಾಗಲೇ ನೀರಾವರಿ ಇಲಾಖೆ ಹಣವನ್ನು ಡೆಪಾಸಿಟ್ ಮಾಡಿದೆ. ಅದನ್ನು ರೈತರಿಗೆ ನೀಡುವುದು ಮಾತ್ರ ಬಾಕಿ ಉಳಿದುಕೊಂಡಿದೆ. ಆದಷ್ಟು ಬೇಗನೆ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಮಳೆಯಿಲ್ಲದೆ ಪ್ರತಿಬಾರಿಯೂ ಬರಕ್ಕೆ ತುತ್ತಾಗುವ ಕೊಪ್ಪಳ ಜಿಲ್ಲೆಯಲ್ಲಿ ಇಂತಹ ನೀರಾವರಿ ಯೋಜನೆಗಳು ಅತ್ಯವಶ್ಯ. ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಮಾತ್ರ ರೈತರ ಬದುಕು ಹಸನಾಗಲಿದೆ. ಅಳವಂಡಿ-ಬೆಟಿಗೇರಿ ಏತ ನೀರಾವರಿ ಯೋಜನೆ ರೈತರ ಬದುಕಿನಲ್ಲಿ ಬೆಳಕು ಮೂಡಿಸಲಿ ಎಂಬುದೇ ನಮ್ಮ ಆಶಯ.