ಕೊಪ್ಪಳ : ಸಂವೇದನೆ, ಮಾನವೀಯತೆ ತುಡಿತ, ರೈತರ ಬಗ್ಗೆ ಕಾಳಜಿ ಹಾಗೂ ರೈತರನ್ನು ಮೇಲೆತ್ತಲು ಕಾರ್ಯ ರೂಪಿಸುವ ಪ್ರಜ್ಞೆ ಇಲ್ಲದಿರುವ ಸಚಿವ ಬಿ ಸಿ ಪಾಟೀಲ್ ಕೃಷಿ ಸಚಿವರಾಗಿ ಮುಂದುವರೆಯುವುದಕ್ಕೆ ನಾಲಾಯಕ್ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸಚಿವ ಬಿ ಸಿ ಪಾಟೀಲ್ ರೈತರ ಆತ್ಮಹತ್ಯೆ ಕುರಿತು ನೀಡಿರುವ ಹೇಳಿಕೆ ಸಂವೇದನೆ ಇಲ್ಲದ ದುರಹಂಕಾರ ಮಾತಾಗಿದೆ. ಅವರು ಯಾವುದೇ ನೈತಿಕತೆ ಇಲ್ಲದ ವ್ಯಕ್ತಿ.
ಕೃಷಿ ಸಚಿವರಾಗಿ ರೈತರ ಪರವಾಗಿ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ಮಾಡಬೇಕು. ಆದರೆ, ರೈತರ ಬಗ್ಗೆ ಈ ರೀತಿಯಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಅವರ ಬದ್ಧತೆ ಏನು ಎಂಬುದು ನಮಗೆ ಗೊತ್ತಿದೆ. ಯಾವ ಸಂದರ್ಭದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಅರಿತು ಮಾತನಾಡಬೇಕು ಎಂದರು.
ಇದನ್ನು ಓದಿ: ಕೃಷಿ ಸಚಿವರ ಹೇಳಿಕೆಗೆ 'ಕೈ' ಆಕ್ರೋಶ: ಬಿ.ಸಿ.ಪಾಟೀಲ್ ಸ್ಪಷ್ಟೀಕರಣ
ಬಿ ಸಿ ಪಾಟೀಲ್ ಪೊಲೀಸ್ ಭಾಷೆಯಲ್ಲಿ ಮಾತನಾಡಿದ್ರೆ ಅದು ದುರಹಂಕಾರದ ಪರಮಾವಧಿ. ಕೃಷಿ ಸಚಿರಾಗಿದ್ದ ಬೈರೇಗೌಡರು ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಕೃಷಿ ಇಲಾಖೆಯಲ್ಲಿ ಅನೇಕ ಸಚಿವರು ಸಹ ಉತ್ತಮ ಕೆಲಸ ಮಾಡಿದ್ದಾರೆ. ಕೃಷಿ ಸಚಿವರಾದವರಿಗೆ ರೈತರ ಜೊತೆ ಬಾಂಧವ್ಯ ಇರಬೇಕು.
ರೈತರನ್ನು ಕೇವಲ ಉತ್ಪಾದಕರನ್ನಾಗಿ ನೋಡದೆ ಅವರನ್ನು ಅನ್ನ ಕೊಡುವ ವರ್ಗವಾಗಿ ನೋಡಿದಾಗ ಗೌರವ ಬರುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ಕ್ಷುಲ್ಲಕವಾಗಿ ನೋಡುವುದು ತಪ್ಪಾಗುತ್ತದೆ.
ಬಿ ಸಿ ಪಾಟೀಲ್ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ಕೃಷಿ ಖಾತೆಯಿಂದ ಬಿ ಸಿ ಪಾಟೀಲ್ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.