ಗಂಗಾವತಿ: ಇಲ್ಲಿನ ಬೇರೂನಿ ಮಸೀದಿಯ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.
ಮಸೀದಿ ಕಾಂಪ್ಲೆಕ್ಸ್ ನಿರ್ಮಾಣ ಮಾಡುತ್ತಿರುವ ಜಾಗ ಮಾದಿಗ ಸಮುದಾಯಕ್ಕೆ ಸೇರಿದ್ದು, ಇಲ್ಲಿ ಕಟ್ಟಡ ನಿರ್ಮಾಣ ಮಾಡಿ ಮಸೀದಿಯ ಆಡಳಿತ ಸಮಿತಿಯು ಅನಗತ್ಯ ವಿವಾದ ಸೃಷ್ಟಿಸಲು ಮುಂದಾಗಿದೆ ಎಂದು ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ಜಿಲ್ಲಾಧಿಕಾರಿಯವರೆಗೂ ಹೋಗಿತ್ತು.
ದಾಖಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ಮಸೀದಿ ಸಮಿತಿಗೆ ಕಟ್ಟಡ ನಿರ್ಮಿಸಲು ಅನುಮತಿ ಕೊಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾದಿಗ ಸಮುದಾಯದ ಮುಖಂಡ ಹುಸೇನಪ್ಪ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗದಂತೆ ಕಲಂ 144 ಜಾರಿ ಮಾಡಿರುವ ತಹಶೀಲ್ದಾರ್ ಯು. ನಾಗರಾಜ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಭದ್ರತೆಗಾಗಿ ಡಿವೈಎಸ್ಪಿ ಉಜ್ಜನಕೊಪ್ಪ, ಸಿಪಿಐಗಳಾದ ವೆಂಕಟಸ್ವಾಮಿ, ಉದಯರವಿ ಅವರನ್ನು ನಿಯೋಜಿಸಲಾಗಿದೆ. ನಗರಸಭೆ ಆಯುಕ್ತ ಅರವಿಂದ ಜಮಖಂಡಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ : ಸಿಡಿ ಪ್ರಕರಣ: ಇಂದು ನರೇಶ್, ಶ್ರವಣ್ ಜಾಮೀನು ಅರ್ಜಿ ತೀರ್ಪು