ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಏಕಸ್ ಕಂಪೆನಿಯ ಆಟಿಕೆ ವಸ್ತುಗಳ ಕೈಗಾರಿಕೆಗೆ ನಾಳೆ ಭೂಮಿ ಪೂಜೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಭೂಮಿ ಪೂಜೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸುತ್ತಿದ್ದು, ಎಲ್ಲಾ ರೀತಿಯಿಂದಲೂ ಏಕಸ್ ಕಂಪೆನಿ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ಭಾನಾಪುರ ಬಳಿ ಬೃಹತ್ ಪೆಂಡಾಲ್ ಹಾಕಿದ್ದು, ಕಾರ್ಯಕ್ರಮದಲ್ಲಿ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಓದಿ: ಬೆಳ್ತಂಗಡಿ ಸಮೀಪ ಸತ್ತು ಬಿದ್ದ ಹದ್ದುಗಳು; ಹಕ್ಕಿಜ್ವರದ ಅತಂಕ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಹಾಲಪ್ಪ ಆಚಾರ್, ಏಕಸ್ ಕಂಪೆನಿಯು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಆಟಿಕೆ ವಸ್ತುಗಳ ತಯಾರಿಕಾ ಘಟಕ ಸ್ಥಾಪನೆ ಮಾಡುತ್ತಿರೋದು ಒಂದು ಒಳ್ಳೆಯ ಬೆಳವಣಿಗೆ. ಇದರಿಂದ ಈ ಭಾಗದ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಆಟಿಕೆ ವಸ್ತುಗಳ ತಯಾರಿಕಾ ಘಟಕದ ಭೂಮಿ ಪೂಜೆಗೆ ಸಿಎಂ ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿ.ಸಿ. ಪಾಟೀಲ್ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಆದರೆ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಸ್ಥಳೀಯರಿಗೆ ಅನೇಕ ಅವಕಾಶಗಳು ದೊರೆಯುತ್ತವೆ ಎಂದರು.