ಕೊಪ್ಪಳ: ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿಗಳಿಬ್ಬರು ಕಾಳಸಂತೆಯಲ್ಲಿ ಮಾರಾಟ ಮಾಡಲು ವಸತಿ ಶಾಲೆಯ ಆಹಾರ ಸಾಮಗ್ರಿ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಟಾಟಾ ಏಸ್ ವಾಹನದಲ್ಲಿ ಆಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದನ್ನು ಕಂಡ ಗ್ರಾಮಸ್ಥರು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಲಿಂಗನಬಂಡಿ ಗ್ರಾಮದಲ್ಲಿರುವ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಶರಣಪ್ಪ ಹಾಗೂ ವಾರ್ಡನ್ ಹನುಮಂತಪ್ಪ ಎಂಬುವರು ವಸತಿ ಶಾಲೆಯ ಮಕ್ಕಳಿಗೆ ನೀಡಬೇಕಾದ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಕ್ಕಿ, ಬೇಳೆ, ಅಡುಗೆ ಎಣ್ಣೆ, ರವವಾ, ಅವಲಕ್ಕಿ, ಬೆಲ್ಲ ಸೇರಿದಂತೆ ಇನ್ನಿತರೆ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ. ಆದರೆ ಸರ್ಕಾರ ಈಗ ಶಾಲೆಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಆಹಾರ ಪದಾರ್ಥ ಕೆಡಬಾರದು ಎಂಬ ಉದ್ದೇಶದಿಂದ ಸಂಬಂಧಿಸಿದವರಿಗೆ ಹಿಂದಿರುಗಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಪತ್ರವೊಂದನ್ನು ಶಾಲೆಯವರು ತೋರಿಸಿದ್ದಾರೆ. ಆದರೆ, ಯಾವ ವಸತಿ ಶಾಲೆಗೂ ಇಲ್ಲದ ಈ ನೀತಿ ನಮ್ಮೂರ ಶಾಲೆಗೆ ಹೇಗೆ ಬಂತು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಓದಿ : ಗಲಾಟೆ ಮಾಡಿದವರ ಜೊತೆ ಯಶ್ ಫೋಟೋ ವೈರಲ್: ಗ್ರಾಮಸ್ಥರಿಂದ ಅಸಮಾಧಾನ