ಗಂಗಾವತಿ : ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯತ್ ಕಂದಾಯ ನಿರೀಕ್ಷಕ ಬಸವರಾಜ ಅಂಗಡಿ ಅವರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈ ಮೊದಲು ವೆಂಕಟಗಿರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಬಸವರಾಜ ಅಂಗಡಿ ಸುಮಾರು ಎರಡು ತಿಂಗಳ ಹಿಂದೆ ವೆಂಕಟಗಿರಿಯಿಂದ ನವಲಿ ಗ್ರಾಮ ಪಂಚಾಯತ್‌ಗೆ ವರ್ಗಾವಣೆಗೊಂಡಿದ್ದರು.
ಗಂಗಾವತಿ ತಾಲೂಕಿನ ಹಂಪಸದುರ್ಗ ಗ್ರಾಮದ ರೇಣುಕಮ್ಮ ಕಾಂಗೇರಿ ಎಂಬುವರು ವಿಧವಾ ವೇತನ ಮತ್ತು ವಂಶವೃಕ್ಷ ಮಾಡಿಕೊಡಲು ವೆಂಕಟಗಿರಿ ಪಂಚಾಯತ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ವೆಂಕಟಗಿರಿಯಿಂದ ವರ್ಗಾವಣೆಗೊಂಡಿದ್ದರೂ ಸಹ ಬಸವರಾಜ ಅಂಗಡಿ ಈಗಲೂ ವೆಂಕಟಗಿರಿ ಗ್ರಾಪಂಗೆ ಸಂಬಂಧಿಸಿದ ಕೆಲಸದಲ್ಲಿ ಅರ್ಜಿದಾರರಿಗೆ 10 ಸಾವಿರ ರೂಪಾಯಿಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಬೇಡಿಕೆಯ ಲಂಚದ ಹಣದಲ್ಲಿ 800 ರೂಪಾಯಿಗಳನ್ನು ಮುಂಗಡ ಪಡೆದಿದ್ದರು.
ಉಳಿದ ಲಂಚದ ಬಾಕಿ 4200 ರೂಪಾಯಿಯನ್ನು ಗಂಗಾವತಿಯ ಕೆಜಿಎಫ್ ಆಟೋವರ್ಕ್ಸ್‌ನಲ್ಲಿ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ಎಸಿಬಿ ಡಿಎಸ್ಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಬಿ ಇನ್ಸ್ಪೆಕ್ಟರ್ಗಳಾದ ಶ್ರೀ ಶಿವರಾಜ್ ಇಂಗಳೆ, ಆಂಜನೇಯ ಡಿ. ಎಸ್, ಸಿಬ್ಬಂದಿಗಳಾದ ರಂಗನಾಥ, ಸಿದ್ದಯ್ಯ, ಜಗದೀಶ್, ಗಣೇಶ್, ಉಮೇಶ್, ಸವಿತಾ, ಆನಂದ್ ಹಾಗೂ ಬಸಪ್ಪ ಭಾಗವಹಿಸಿದ್ದರು. ಕೊಪ್ಪಳ ಎಸಿಬಿ ಡಿಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.