ಕೊಪ್ಪಳ: ನಿರಂತರವಾಗಿ ಸುರಿದ ಮಳೆಯಿಂದಾಗಿ ದೋಟಿಹಾಳ - ಮುದೇನೂರ ನಡುವಿನ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಇದರಿಂದಾಗಿ ಹಳ್ಳದ ಮಧ್ಯದಲ್ಲಿ ಲಾರಿಯೊಂದು ಸಿಲುಕಿಕೊಂಡಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ-ಮುದೇನೂರು ಬಳಿ ಇರುವ ಹಳ್ಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯವಾಗಿ ಹಳ್ಳದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಂದಿದೆ. ನೀರಿನ ರಭಸಕ್ಕೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.
ಈ ತಾತ್ಕಾಲಿಕ ಸೇತುವೆ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ತಾತ್ಕಾಲಿಕ ಸೇತುವೆ ಕೊಚ್ಚಿ ಹೋದ ಪರಿಣಾಮ ಲಾರಿಯೊಂದು ಮಧ್ಯದಲ್ಲಿ ಸಿಲುಕಿಕೊಂಡಿದ್ದು, ಹೊರ ತರಲು ಹರಸಾಹಸ ಮಾಡಲಾಯಿತು. ಕೊಚ್ಚಿ ಹೋದ ಸೇತುವೆಯ ಮಧ್ಯೆ ಲಾರಿ ಸಿಲುಕಿಕೊಂಡಿರುವುದರಿಂದ ಸಂಚಾರ ಬಂದ್ ಆಗಿದೆ. ಇದು ಬಾಗಲಕೋಟೆ ಜಿಲ್ಲೆಯ ಇಳಕಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಇಂತಹ ಸಮಸ್ಯೆ ಮಳೆಗಾಲದಲ್ಲಿ ಎದುರಾಗುತ್ತಿದೆ.