ಗಂಗಾವತಿ: ಇವರು ಟೀಚರ್ ಅಲ್ಲ. ಬದಲಾಗಿ ಸ್ಕೆತಸ್ಕೋಪ್ ಕಿವಿಗೆ ಹಾಕಿ, ರೋಗಿಯ ನಾಡಿ ಹಿಡಿದು ಪರೀಕ್ಷೆ ಮಾಡಿ ಚಿಕಿತ್ಸೆ ಕೊಡುವ ವೈದ್ಯರು. ಆದರೆ, ಶುಕ್ರವಾರ ಸರ್ಕಾರಿ ಆಸ್ಪತ್ರೆಯಲ್ಲಿ ತರಬೇತಿ ಹಂತದ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರ ರೀತಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು.
ನಗರದ ಗಂಗಾವತಿ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ದ್ವಿತೀಯ ಮತ್ತು ತೃತೀಯ ವರ್ಷದ ಶುಶ್ರೂಷಕ ಕೋರ್ಸ್ನ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಮುಖ್ಯವೈದ್ಯಾಧಿಕಾರಿ ಈಶ್ವರ ಸವುಡಿ ಪಾಠ ಮಾಡಿದರು.
ವಿದ್ಯಾರ್ಥಿಗಳನ್ನು ವಾರ್ಡ್ಗಳಿಗೆ ಕರೆದೊಯ್ದು ಅವರ ಮುಂದೆ ರೋಗಿಗಳನ್ನು ತಪಾಸಣೆ ಮಾಡಿದರು. ಬಳಿಕ ರೋಗಿಗಳಿಗೆ ಉಂಟಾದ ಅಸೌಖ್ಯದ ವಿವರಣೆ, ಕಾರಣ, ಚಿಕಿತ್ಸೆಗಳಂತಹ ಪ್ರಾಥಮಿಕ ಅಂಶಗಳ ಬಗ್ಗೆ ಮಾಹಿತಿ ನೀಡಿದರು.