ಕೊಪ್ಪಳ: ವಿಕಲಾಂಗ ಮಗನ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸುಮಾರು ನಾಲ್ಕು ತಿಂಗಳಿಂದ ಪರದಾಡುತ್ತಿದ್ದ ವ್ಯಕ್ತಿ ಇಂದು ಖುಷಿಯಾಗಿದ್ದಾರೆ. 'ಈಟಿವಿ ಭಾರತ' ಅವರ ಸಮಸ್ಯೆಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದೆ.
ಹೌದು, ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ ಏಳುಕೋಟೇಶ್ ಕೋಮಲಾಪುರ ಎಂಬುವರು ತಮ್ಮ ವಿಕಲಚೇತನ ಮಗ ಶಿವಕುಮಾರ್ ನ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಾಲ್ಕು ತಿಂಗಳುಗಳಿಂದ ಪರದಾಡುತ್ತಿದ್ದರು. ವಿದ್ಯಾರ್ಥಿ ಶಿವಕುಮಾರ್ನ ಎಡ ಮುಂಗೈ ಇಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿತ್ತು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಶಿವಕುಮಾರ್ನ ತಂದೆ ಏಳುಕೋಟೇಶ್ ಅವರು ತಮ್ಮ ಮಗನೊಟ್ಟಿಗೆ ಈವರೆಗೆ ಆಧಾರ್ ಕೇಂದ್ರ ಸೇರಿದಂತೆ ನಾನಾ ಕಡೆ ಅಲೆದಾಡಿದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಅಪ್ಲೋಡ್ ಮಾಡಲು ಆಗದ್ದಕ್ಕೆ ಬೇಸತ್ತಿದ್ದರು.
ತಮಗಾಗಿರುವ ಸಮಸ್ಯೆಯನ್ನು ಏಳುಕೋಟೇಶ್ ಅವರು ನಮ್ಮ ಕೊಪ್ಪಳ ನಮ್ಮ ಪ್ರತಿನಿಧಿ ಮೌನೇಶ್ ಬಡಿಗೇರ್ ಗಮನಕ್ಕೆ ತಂದಿದ್ದರು. ಏಳುಕೋಟೇಶ್ ಅವರಿಗಾದ ಸಮಸ್ಯೆ ಕುರಿತಂತೆ 'ಈಟಿವಿ ಭಾರತ' ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಆಧಾರ್ ಅಪ್ಡೇಟ್ ಮಾಡಿಸಲಾಗದ ಏಳುಕೋಟೇಶ್ ಹಾಗೂ ಅವರ ಮಗನನ್ನು ನಮ್ಮ ಪ್ರತಿನಿಧಿ ಮೌನೇಶ್ ಅವರು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರನ್ನು ಭೇಟಿ ಮಾಡಿಸಿ ಶಿವಕುಮಾರ್ಗೆ ಆಗಿರುವ ತೊಂದರೆಯನ್ನು ಗಮನಕ್ಕೆ ತಂದರು.
ಈಟಿವಿ ಭಾರತದ ಈ ಕಳಕಳಿಗೆ ಹಾಗೂ ಅವರ ಸಮಸ್ಯೆಯನ್ನು ಕೇಳಿ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಆಧಾರ್ ಕೇಂದ್ರದ ಅಧಿಕಾರಿಗಳನ್ನು ಹಾಗೂ ಸಂಬಂಧಿಸಿದ ಆಪರೇಟರ್ಗಳನ್ನು ತಮ್ಮ ಚೇಂಬರ್ಗೆ ಕರೆಸಿಕೊಂಡು ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಆದೇಶಿಸಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರು ಸಿಬ್ಬಂದಿಯನ್ನು ಕರೆದು ಖಡಕ್ ಆದೇಶ ನೀಡುತ್ತಿದ್ದಂತೆಯೇ ಆಧಾರ್ ಕೇಂದ್ರದ ಅಧಿಕಾರಿಗಳು ಶಿವಕುಮಾರ್ನನ್ನು ಸ್ಪಂದನ ಕೇಂದ್ರಕ್ಕೆ ಕರೆದೊಯ್ದು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ತತಕ್ಷಣವೇ ಮಾಡಿ ಅಪ್ಲೋಡ್ ಮಾಡಿದರು. ಇದರಿಂದಾಗಿ ಸುಮಾರು ನಾಲ್ಕು ತಿಂಗಳ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಆಧಾರ್ ಕಾರ್ಡ್ ಅಪ್ಡೇಟ್ಗಾಗಿ ಅಲೆದಾಡುತ್ತಿದ್ದ ತಂದೆ-ಮಗನ ಮುಖದಲ್ಲಿ ಮಂದಹಾಸ ಮೂಡಿದೆ.
ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿಸಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿ ಮೆರೆದ 'ಈಟಿವಿ ಭಾರತ'ಕ್ಕೆ ಏಳುಕೋಟೇಶ್ ಕೋಮಲಾಪುರ ಹಾಗೂ ಅವರ ಮಗ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ನಮ್ಮ ವರದಿ ಮತ್ತು ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿಯವರಿಗೆ ಈಟಿವಿ ಭಾರತ ಕಡೆಯಿಂದ ಧನ್ಯವಾದ ತಿಳಿಸುತ್ತೇವೆ.