ಗಂಗಾವತಿ : ಹೆಣ್ಣು ಮಗು ಜನಿಸಿತು ಎಂದು ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಮುಳ್ಳಿನ ಗಿಡಗಳ ಮೇಲೆ ಎಸೆದು ಹೋದ ಘಟನೆ ತಾಲೂಕಿನ ಮರಳಿ ಸಮೀಪದ ಪ್ರಗತಿನಗರದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದ್ದು, ಬಹಿರ್ದೆಸೆಗೆ ಹೋದ ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ.
ಮುಳ್ಳಿನ ಕಂಟಿಯಿಂದ ಮಗು ಅಳುತ್ತಿರುವ ಶಬ್ದ ಕೇಳಿ ಬಂದ ಹಿನ್ನೆಲೆ ಮಹಿಳೆಯರು ಸ್ಥಳಕೆ ಹೋಗಿ ನೋಡಿದ್ದಾರೆ. ಬಳಿಕ ನವಜಾತ ಶಿಶು ಕಂಡುಬಂದಿದ್ದು, ಕೂಡಲೇ ಮಗುವಿನ ರಕ್ಷಣೆಗೆ ಧಾವಿಸಿದ್ದಾರೆ. ಮಗುವಿನ ಮೈಮೇಲೆ ಮುಳ್ಳುಗಳು ತರಚಿದ ಗಾಯಗಳಿವೆ.
ಇಂದು ಬೆಳಗಿನ ಜಾವ ಶಿಶುವನ್ನು ಮುಳ್ಳಿನಕಂಟಿಗೆ ಎಸೆದು ಹೋಗಿರುವ ಸಾಧ್ಯತೆ ಇದ್ದು, ನವಜಾತ ಶಿಶುವನ್ನು ರಕ್ಷಣೆ ಮಾಡಿರುವ ಗ್ರಾಮದ ಕೆಲ ಮಹಿಳೆಯರು ಆರೈಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರಗತಿನಗರ ಗ್ರಾಮದ ಗಂಗಮ್ಮ ಎನ್ನುವವರ ಮನೆಯಲ್ಲಿ ಮಗುವಿನ ರಕ್ಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ : ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು : ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು
ಜಮೀನಿನಲ್ಲಿ ನವಜಾತ ಶಿಶು ಪತ್ತೆ : ಕಳೆದ ತಿಂಗಳ ಏಪ್ರಿಲ್ 5 ರಂದು ಆನೇಕಲ್ ತಾಲೂಕಿನ ಹುಲ್ಲಹಳ್ಳಿಯ ಖಾಲಿ ಜಮೀನಿನಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿತ್ತು. ಬನ್ನೇರುಘಟ್ಟ ಪೊಲೀಸರು ಶಿಶುವನ್ನು ರಕ್ಷಿಸಿದ್ದರು. ಸಿದ್ದಲಾಂಗಾರೆಡ್ಡಿ ಎಂಬುವರ ಜಮೀನಿನಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ನವಜಾತ ಶಿಶು ಪತ್ತೆಯಾಗಿತ್ತು. ನಂತರ ಸ್ಥಳೀಯರು ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಶಿಶು ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಕವಿತಾ, ಇನ್ಸ್ಪೆಕ್ಟರ್ ಉಮಾಮಹೇಶ್ ಮಗುವನ್ನು ಜಿಗಣಿ ಆಸ್ಪತ್ರೆಗೆ ಪ್ರಾಥಮಿಕ ಆರೈಕೆಗೆ ರವಾನಿಸಿದ್ದರು. ನಂತರ ಶಿಶುವನ್ನು ಆನೇಕಲ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಹೆಚ್ಚಿನ ಆರೈಕೆಗೆ ಕಳುಹಿಸಿಕೊಡಲಾಗಿತ್ತು. ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಖಾಲಿ ಜಮೀನಿನಲ್ಲಿ ನವಜಾತ ಶಿಶು ಪತ್ತೆ : ಪೊಲೀಸರಿಂದ ಶಿಶು ರಕ್ಷಣೆ
ಶಿಶುವನ್ನು ಕಚ್ಚಿಕೊಂಡು ತಿರುಗಾಡಿದ ನಾಯಿ : ಇನ್ನು ನಾಯಿಯೊಂದು ಅಪರಿಚಿತ ಹೆಣ್ಣು ನವಜಾತ ಶಿಶುವನ್ನು ಬಾಯಿಯಲ್ಲಿ ಕಚ್ಚಿಕೊಂಡು ತಿರುಗಾಡಿದ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್ 31 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ನಾಯಿ ಬಾಯಿಯಿಂದ ಶಿಶುವನ್ನು ಕಚ್ಚಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಬಳಿಕ ಅದನ್ನು ಓಡಿಸಿದ್ದರು. ಆದರೆ, ಅಷ್ಟರಲ್ಲೇ ಶಿಶು ಮೃತಪಟ್ಟಿರುವುದು ಗೊತ್ತಾಗಿತ್ತು. ಮೃತ ಮಗು ಯಾರದ್ದು?, ಯಾರು ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿರಲಿಲ್ಲ.
ಇದನ್ನೂ ಓದಿ : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಕಚ್ಚಿಕೊಂಡು ತಿರುಗಾಡಿದ ನಾಯಿ