ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಶನಿವಾರ ಪವನಸುತ ಆಂಜನೇಯನಿಗೆ ಮುಸ್ಲಿಂ ಕುಟುಂಬವೊಂದು ವಿಶೇಷ ಪೂಜೆ ಸಲ್ಲಿಸಿ, ದರ್ಶನಕ್ಕೆ ಬಂದ ನೂರಾರು ಭಕ್ತರಿಗೆ ಪ್ರಸಾದ ವಿತರಿಸಿ ಸಾಮರಸ್ಯ ಮೆರೆದರು.
ನಗರದ ಸಿಬಿಎಸ್ ವೃತ್ತದಲ್ಲಿ ಖಾಸಗಿ ಟ್ರಾವೆಲ್ಸ್ ಏಜನ್ಸಿ ನಿರ್ವಹಿಸುತ್ತಿರುವ ಮುನ್ನ ಹಾಗೂ ಬೀಬಿ ಕುಟುಂಬದವರು ಶನಿವಾರ ಅಂಜನಾದ್ರಿ ಬೆಟ್ಟ ಹತ್ತಿ ಅಂಜನೇಯನಿಗೆ ವಿಶೇಷ ಪೂಜೆಸಲ್ಲಿಸಿದರು. ಬಳಿಕ ನೂರಾರು ಭಕ್ತರಿಗೆ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಲಿ, ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿನ ರೈತರು ಈ ಬಾರಿ ಎರಡು ಬೆಳೆ ಭತ್ತ ಬೆಳೆಯಲಿ, ನಾಡು ಸಮೃದ್ಧಿಯಾಗಲಿ ಎಂಬ ಹರಕೆಯಿಂದ ಪೂಜೆ ಸಲ್ಲಿಸಿದ್ದೇವೆ ಎಂದರು.