ಗಂಗಾವತಿ: ಹನುಮ ಜಯಂತಿ ಅಂಗವಾಗಿ ತಾಲೂಕಿನ ಅಂಜನಾದ್ರಿಯಲ್ಲಿ ಹಮ್ಮಿಕೊಂಡಿದ್ದ ಮಾಲಾ ವಿರಮಣಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಹನುಮನ ಭಕ್ತರಿಗೆ ನಗರದಲ್ಲಿ ಮುಸ್ಲಿಂ ಸಮುದಾಯದವರು ಹೂವು-ಹಣ್ಣು ಕೊಟ್ಟು ಶುಭ ಹಾರೈಸಿ ಸೌಹಾರ್ದತೆ ಮೆರೆದು ಗಮನ ಸೆಳೆದರು.
ಎಪಿಎಂಸಿಯಿಂದ ಆರಂಭವಾದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಇಲ್ಲಿನ ಜುಮ್ಮಾ ಮಸೀದಿಯ ಮುಂದೆ ಬಂದಾಗ ಮಸೀದಿಯ ಆಡಳಿತ ಮಂಡಳಿಯ ಮುಖ್ಯಸ್ಥ ನವಾಬ್ ಸಾಬ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಪಾದಯಾತ್ರಿಗಳನ್ನು ಬರಮಾಡಿಕೊಂಡರು. ಬಳಿಕ ಹನುಮನ ಭಕ್ತರ ಮೇಲೆ ಪುಷ್ಪಗಳನ್ನು ಎರಚಿ ಶುಭ ಕೋರುವುದರ ಜೊತೆಗೆ ಬಟ್ಟೆಯ ಬ್ಯಾಗ್ನಲ್ಲಿ ಹೂವು-ಹಣ್ಣುಗಳನ್ನು ಕೊಟ್ಟು ಬೀಳ್ಕೊಟ್ಟರು.
ಎರಡು ವರ್ಷಗಳ ಹಿಂದೆ ಇದೇ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆ ಇಡೀ ರಾಜ್ಯದ್ಯಾದಂತ ಸದ್ದು ಮಾಡಿತ್ತು, ಅದೆಲ್ಲವನ್ನು ಮರೆತು ಇದೀಗ ಕೋಮು ಸಾಮರಸ್ಯ ಮೂಡಿಸುತ್ತಿರುವ ಮುಸ್ಲಿಂ ಬಾಂಧವರ ಕಾರ್ಯ ನಿಜಕ್ಕೂ ಶ್ಲಾಘನೀಯ.