ಕುಷ್ಟಗಿ (ಕೊಪ್ಪಳ): ಮಹಾಮಾರಿ ಕೊರೊನಾ ವೈರಸ್ ಸಂಕಷ್ಟದ ದಿನಗಳಲ್ಲಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಲು ಮೈಸೂರು ಮೂಲದ ಯುವಕನೋರ್ವ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಪಾದಯಾತ್ರೆ ಕೈಗೊಂಡಿದ್ದಾರೆ.
ಮೈಸೂರಿನ ಡಿಷ್ ಸೇಲ್ಸ್ & ಸರ್ವಿಸ್ ಉದ್ಯೋಗಿ 33 ವರ್ಷದ ಭರತ್ ಪಿ.ಎನ್, ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಸಲ್ಲಿಸಲು ಡಿಸೆಂಬರ್ 11ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಇಂದು ಕುಷ್ಟಗಿ ತಲುಪಿರುವ ಭರತ್, ತಮ್ಮ ಪಾದಯಾತ್ರೆ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಹೇಳಿದೆ. ನಾನು ಇಮ್ಯುನಿಟಿ ಹೆಚ್ಚಿಕೊಳ್ಳುತ್ತಲೇ ಹುಮ್ಯಾನಿಟಿ ಬಿಲ್ಡ್ ಮಾಡುವ ಸಂದೇಶದೊಂದಿಗೆ ಈ ನಡಿಗೆ ಆರಂಭಿಸಿರುವೆ. ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಳ್ಳಲು ಅಲ್ಲ ಎಂದರು.
ನನ್ನಂತೆ ಜನರು ನಿತ್ಯ ಐದಾರು ಕಿಲೋ ಮೀಟರ್ ನಡಿಗೆ ಆರಂಭಿಸಿದರೆ ದೇಹದ ಫಿಟ್ನೆಸ್ ಹೆಚ್ಚುತ್ತದೆ. ಇದರಿಂದ ಸುದೀರ್ಘ ಜೀವನ ನಡೆಸಬಹುದಾಗಿದೆ. ನಮ್ಮ ಹಿರಿಯರು ನಡೆದಾಡಿಕೊಂಡೇ ನೂರಕ್ಕೂ ಅಧಿಕ ವರ್ಷ ಬಾಳಿ ಬದುಕಿರುವುದು ನಮ್ಮ ಕಣ್ಮುಂದೆ ಇದೆ. ದಿನವಿಡೀ ಕಂಪ್ಯೂಟರ್, ಲ್ಯಾಪ್ಟಾಪ್ ಮುಂದೆ ಕಾಲ ಕಳೆಯುವ ನಾವು, ನಡೆಯುವುದನ್ನೇ ಮರೆಯುತ್ತಿದ್ದೇವೆ ಎಂದರು.
ಮಾರ್ಗಮಧ್ಯೆ ಪ್ರಕೃತಿ ಸಂಪತ್ತಿನ ಮಹತ್ವ, ಕೊರೊನಾ ಜಾಗೃತಿ ಮೂಡಿಸುತ್ತಿರುವುದಾಗಿ ವಿವರಿಸಿದ ಅವರು, ಮಾರ್ಗಮಧ್ಯೆ ನೂರಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವುದಾಗಿ ತಿಳಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನನಗಾಗಿ ನೀವು ಏನನ್ನೂ ಕೊಡಬೇಡಿ. ಪ್ರತಿಯೊಬ್ಬರು ಗಿಡ ನೆಡಿ ಸಾಕು ಎಂದರು. ಭರತ್ ಪಿ.ಎನ್ ಅವರಿಗೆ ಸ್ಥಳೀಯರಾದ ವೀರೇಶ ಬಂಗಾರ ಶೆಟ್ಟರ್, ಶುಭಕೋರಿ 1 ಸಾವಿರ ರೂ. ಧನ ಸಹಾಯ ಮಾಡಿದರು.