ಕೊಪ್ಪಳ: ಮನೆಯಲ್ಲಿನ ಸಾಕು ನಾಯಿ ಸುಮಾರು 20 ಗ್ರಾಂ ಚಿನ್ನದ ಚೈನ್ ಗುಳುಂ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಕಾರಟಗಿ ಪಟ್ಟಣದ ನಿವಾಸಿಯಾಗಿರುವ ದಿಲೀಪ್ ಕುಮಾರ್ ಹಿರೇಮಠ ಎಂಬುವವರ ಪಮೋರಿಯನ್ ತಳಿಯ ನಾಯಿ ಚಿನ್ನ ನುಂಗಿದೆ.
ಕಳೆದ ಎರಡು ತಿಂಗಳ ಹಿಂದಿನಿಂದ ಮನೆಯಲ್ಲಿ ಸಾಕುತ್ತಿದ್ದ ಮೂರು ತಿಂಗಳ ಪ್ರಾಯದ ಈ ನಾಯಿಮರಿ ನಿನ್ನೆ ರಾತ್ರಿ ಸುಮಾರು 23 ಇಂಚು ಉದ್ದದ 20 ಗ್ರಾಂ ತೂಕದ ಚಿನ್ನದ ಸರವನ್ನು ತಿಂದಿದೆ. ದಿಲೀಪ್ ಅವರು ನಿನ್ನೆ ರಾತ್ರಿ ತಮ್ಮ ಕೊರಳಲ್ಲಿದ್ದ ಚಿನ್ನದ ಚೈನ್‍ನ್ನು ಬಿಚ್ಚಿ ಕೆಳಗೆ ಇಟ್ಟಿದ್ದರಂತೆ. ರಾತ್ರಿ ವೇಳೆಯಲ್ಲಿ ಈ ನಾಯಿ ಆ ಚಿನ್ನದ ಚೈನನ್ನು ಗುಳುಂ ಮಾಡಿದೆ. ಇಂದು ಬೆಳಗ್ಗೆ ಎದ್ದು ನಾಯಿಗೆ ಹಾಲಿಡಲು ಹೋದಾಗ ಚಿನ್ನದ ಚೈನ್‍ನ ತುಂಡೊಂದು ಕೆಳಗೆ ಬಿದ್ದಿರೋದು ಕಾಣಿಸಿದೆ. ಬಳಿಕ ಚಿನ್ನದ ಚೈನನ್ನು ದಿಲೀಪ್ ಅವರು ಹುಡುಕಾಡಿದ್ದಾರೆ. ಅದು ಸಿಗದೆ ಇದ್ದಾಗ ನಾಯಿ ಗುಳುಂ ಮಾಡಿರುವ ಶಂಕೆಯಿಂದ ಸ್ಥಳೀಯ ಪಶುವೈದ್ಯರಾದ ಡಾ. ಆಕಾಶ್ ಅವರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಾರೆ. ತಪಾಸಣೆ ಮಾಡಿದ ಬಳಿಕ ನಾಯಿ ಚಿನ್ನದ ಸರವನ್ನು ತಿಂದು ನುಂಗಿರೋದು ಪತ್ತೆಯಾಗಿದೆ.
ನಾಯಿಯು ಮಲ ಮಾಡಿದಾಗ ಅದರ ಮಲದಲ್ಲಿ ಚಿನ್ನದ ಸರದ ತುಂಡುಗಳು ಪತ್ತೆಯಾಗಿವೆ. ಹೀಗಾಗಿ ನಾಯಿ ಎರಡು ತೊಲ ಚಿನ್ನದ ಚೈನ್ ನುಂಗಿರುವುದು ಪಕ್ಕಾ ಆಗಿದೆ. ಈಗ ನಾಯಿಯ ಆರೋಗ್ಯ ಸ್ಥಿರವಾಗಿದೆ. ಉಳಿದ ಚೈನ್‍ನ ತುಂಡುಗಳು ಮಲದ ಮೂಲಕ ಬರಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ದಿಲೀಪಕುಮಾರ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.