ಗಂಗಾವತಿ: ಭಕ್ತನೊಬ್ಬ ತನ್ನ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮತ್ತು ಸಾಲು, ಸಾಲು ಸಮಸ್ಯೆಗಳನ್ನು ತೊಲಗಿಸುವಂತೆ ಬೇಡಿಕೊಂಡು ಬರೆದಿರುವ ಪತ್ರವೊಂದು ತಾಲೂಕಿನ ಅಂಜನಾದ್ರಿ ದೇಗುಲದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ.
ಕಂದಾಯ ಮತ್ತು ದೇಗುಲದ ಸಿಬ್ಬಂದಿ ಇಂದು ಅಂಜನಾದ್ರಿ ದೇವಾಲಯದ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡುತ್ತಿದ್ದರು. ಈ ವೇಳೆ ಅನಾಮಧೇಯ ಭಕ್ತನೊಬ್ಬ ನನ್ನ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ದೇವರಿಗೆ ಬರೆದಿದ್ದ ಪತ್ರ ದೊರಕಿದೆ.
ಪತ್ರದಲ್ಲಿ ಏನಿದೆ? 'ನನ್ನ ಮೈ ಮೇಲಿರುವ ಎಲ್ಲಾ ಪ್ರಕರಣಗಳನ್ನು ತೊಲಗಿಸು, ಒಳ್ಳೆಯ ಹುದ್ದೆ ಕೊಡಿಸು, ನನ್ನ ಪತ್ನಿಗೆ ಹೆರಿಗೆ ಸೂಸುತ್ರವಾಗಲಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲಿ, ಈ ವರ್ಷನೇ ತಂಗಿಗೆ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿಸುವ, ಸಣ್ಣ ತಮ್ಮನಿಗೆ ಉದ್ಯೋಗ ಬೇಗ ಆಗಲಿ, ಈ ವರ್ಷ ಮನೆ ಕಟ್ಟಲು ಆರಂಭಿಸುವಂತೆ ಆಶೀರ್ವದಿಸು ತಂದೆ ಹನುಮ' ಎಂದು ಸಾಲು, ಸಾಲು ಬೇಡಿಕೆಗಳನ್ನು ಪತ್ರದಲ್ಲಿ ಬರೆದಿದ್ದಾರೆ.
10.45 ಲಕ್ಷ ಮೊತ್ತದ ಹಣ ಸಂಗ್ರಹ:
ಜನವರಿ ಒಂದೇ ತಿಂಗಳಲ್ಲಿ ಅಂಜನಾದ್ರಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಒಟ್ಟು 10.45 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ. ಲಾಕ್ಡೌನ್ ನಡುವೆಯೂ ದಿನಕ್ಕೆ ಸರಾಸರಿ 35ರಿಂದ 38 ಸಾವಿರ ಮೊತ್ತದಷ್ಟು ಹಣ ಸಂಗ್ರಹವಾಗಿದೆ. ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಗ್ರೇಡ್-2 ತಹಶೀಲ್ದಾರ್ ವಿರೂಪಾಕ್ಷಪ್ಪ ಹೊರಪ್ಯಾಟಿ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆಯಿತು. ಕಳೆದ ವರ್ಷ 2021ರ ಡಿಸೆಂಬರ್ 31ರಲ್ಲಿ 17,98 ಲಕ್ಷ ರೂಪಾಯಿ ಸಂಗ್ರಹವಾಗಿತ್ತು ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಡಾಲರ್, ಫಿಲಿಫೈನ್ಸ್ ನಾಣ್ಯ ಪತ್ತೆ: ಹುಂಡಿ ಕಾಣಿಕೆ ಎಣಿಕೆ ನಡೆಸುತ್ತಿದ್ದ ವೇಳೆ ಅಮೆರಿಕದ ಎರಡು ಡಾಲರ್ ಮತ್ತು ಫಿಲಿಪೈನ್ಸ್ ದೇಶದ ಒಂದು ನಾಣ್ಯ ಪತ್ತೆಯಾಗಿದೆ.
ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ