ಕುಷ್ಟಗಿ(ಕೊಪ್ಪಳ): ತಾಲೂಕು ಸರ್ಕಾರಿ ಆಸ್ಪತ್ರೆಯ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ ಸೆಂಟರ್ನಲ್ಲಿ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ನಿರಾಕರಿಸಿ ಮನೆಗೆ ತೆರಳಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ತಾಲೂಕಿನ ಮೀಯಾಪೂರ ಗ್ರಾಮದ ವೃದ್ಧೆಯೋರ್ವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ. ವೈದ್ಯರು ಕುಟುಂಬದವರಿಗೆ ಇನ್ನೂ ಕೆಲವು ದಿನ ಈ ಆಸ್ಪತ್ರೆಯಲ್ಲಿರಲು ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಸಂಬಂಧಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಯೇ ಬೇಡ, ಹೋಮ್ ಐಸೋಲೇಷನ್ ಮಾಡಿಸುವುದಾಗಿ ತಿಳಿಸಿ ಡಿಸ್ಚಾರ್ಜ್ಗೆ ಒತ್ತಾಯಿಸಿದರು. ವೃದ್ಧೆಯ ಆರೋಗ್ಯ ಸ್ಥಿರವಾಗಿದ್ದ ಹಿನ್ನೆಲೆಯಲ್ಲಿ ಅವರು ಹೋಮ್ ಐಸೋಲೇಷನ್ಗೆ ಒಪ್ಪಿದರು. ವಿಧಿಯಿಲ್ಲದೆ ವೈದ್ಯರು ಒಪ್ಪಿಗೆ ನೀಡಿದ್ದಾರೆ. ಆ್ಯಂಬುಲೆನ್ಸ್ ಸೇವೆಯನ್ನು ಸಹ ನಿರಾಕರಿಸಿದ ವೃದ್ಧೆ ಬೈಕ್ನಲ್ಲಿಯೇ ತಮ್ಮ ಗ್ರಾಮಕ್ಕೆ ಬಂದಿದ್ದಾರೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿರುವ ಪ್ರಭಾರ ವೈದ್ಯಾಧಿಕಾರಿ ಡಾ. ಶರಣು ಮೂಲಿಮನಿ ಅವರು, 65 ವರ್ಷದ ವೃದ್ಧೆಗೆ ಈ ಆಸ್ಪತ್ರೆಯಲ್ಲಿ ಒಬ್ಬಂಟಿಯಾಗಿ ಚಿಕಿತ್ಸೆ ಪಡೆಯಲು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮನೆಯವರು ಹೋಮ್ ಐಸೋಲೇಷನ್ಗೆ ಒಪ್ಪಿದ್ದರಿಂದ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕುಷ್ಟಗಿ ನಿವಾಸಿ ಅಬ್ದುಲ್ ನಯೀಮ್ ಪ್ರತಿಕ್ರಿಯಿಸಿ, ಈ ಕೋವಿಡ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದ್ದರಿಂದ ರೋಗಿಗಳು ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.