ಕುಷ್ಟಗಿ(ಕೊಪ್ಪಳ): ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಕಮುನಿ ಅಡ್ಡಪಲ್ಲಕ್ಕಿ ಹೊತ್ತು ಹುಚ್ಚಾಟ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ತಡರಾತ್ರಿ ಡಿವೈಎಸ್ಪಿ ಚಂದ್ರಶೇಖರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಮೊಬೈಲ್ ದೃಶ್ಯಾವಳಿಗಳನ್ನು ಆಧರಿಸಿ ಘಟನೆಗೆ ಕಾರಣರಾದ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಮನೆ ಮನೆ ಹುಡುಕಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ಪರಾರಿಯಾಗಿದ್ದು, ಪತ್ತೆ ಕಾರ್ಯಾಚರಣೆ ನಡೆದಿದೆ. ಸದ್ಯ ಪೊಲೀಸರು ಪಹರೆ ಮುಂದುವರಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ತಡರಾತ್ರಿಯ ಬೆಳವಣಿಗೆ: ಕಳೆದ ರಾತ್ರಿ ಶ್ರೀ ಅವಧೂತ ಶುಕಮುನಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಆರಾಧನಾ ಮಹೋತ್ಸವ ನಡೆಯಬೇಕಿತ್ತು. ಕೋವಿಡ್ ಹಿನ್ನೆಲೆ ದೇವಸ್ಥಾನದೊಳಗೆ ಸರಳ ಆಚರಣೆಗೆ ಅನುಮತಿ ಕಲ್ಪಿಸಿತ್ತು. ಆ ವೇಳೆ ಏಕಾಏಕಿ ದೇವಸ್ಥಾನದೊಳಕ್ಕೆ ನುಗ್ಗಿದ ಭಕ್ತಾದಿಗಳು ಅಡ್ಡಪಲ್ಲಕ್ಕಿ ಹೊತ್ತು ಒಳಾಂಗಣದಲ್ಲಿ ಗರಗರನೇ ತಿರುಗಿಸಿ ಹೊರಕ್ಕೆ ನುಗ್ಗುವ ವೇಳೆ ಶೆಟರ್ಸ್ ಜಖಂ ಮಾಡಿದ್ದರು.
ಇದರಿಂದ ಮಠದ ಆವರಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಘಟನಾ ಸ್ಥಳಕ್ಕೆ ದೇವಸ್ಥಾನ ಕಮಿಟಿ ಅಧ್ಯಕ್ಷೆ, ತಹಶೀಲ್ದಾರ ಎಂ. ಸಿದ್ದೇಶ್, ಸಿಪಿಐ ಚಂದ್ರಶೇಖರ ದೌಡಾಯಿಸಿದ್ದರು. ಸುರಿಯುವ ಮಳೆ ಲೆಕ್ಕಿಸದೆ ಅಡ್ಡ ಪಲ್ಲಕ್ಕಿ ದೋಟಿಹಾಳ, ಕೇಸೂರು ಗ್ರಾಮದೆಲ್ಲೆಡೆ ಸುತ್ತಾಟ ನಡೆಸುತ್ತಿದ್ದದ್ದನ್ನು ಕಂಡ ಪೊಲೀಸರು, ಅವರನ್ನು ತಡೆದು ವಶಕ್ಕೆ ತೆಗೆದುಕೊಂಡರು. ನಂತರ ಅಡ್ಡಪಲ್ಲಕ್ಕಿಯನ್ನು ಪುನಃ ಮಠಕ್ಕೆ ತಲುಪಿಸಲು ಕೆಲವು ಭಕ್ತರು ಹಿಂಜರಿದರು. ವಾಹನವನ್ನು ಸಹ ನೀಡಲಿಲ್ಲ. ಹೀಗಾಗಿ ಸ್ಥಳೀಯರ ನೆರವು ಕೋರಲಾಗಿದ್ದು, ಆಗಲೂ ಅಡ್ಡಪಲ್ಲಕ್ಕಿಯನ್ನು ಅಡ್ಡಾದಿಡ್ಡಿ ತಿರುಗಾಡಿಸಿದ್ದಾರೆ. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು, ತಾವೇ ಅಡ್ಡಪಲ್ಲಕ್ಕಿ ಹೊತ್ತು ಮಠದಲ್ಲಿ ಇರಿಸಿದ್ದಾರೆ.