ಗಂಗಾವತಿ: ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ಸಾಬೀತಾದ ಹಿನ್ನೆಲೆ ಪಂಚಾಯತ್ ರಾಜ್ ಇಲಾಖೆಯ ಪ್ರಭಾವಿ ಕಿರಿಯ ಇಂಜಿನಿಯರ್ ಒಬ್ಬರನ್ನು ಇಲಾಖೆ ತನಿಖೆ ಕಾಯ್ದಿರಿಸಿ ಅಮಾನತು ಮಾಡಿದೆ.
ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಇಲ್ಲಿನ ಉಪ ವಿಭಾಗದ ಕಿರಿಯ ಇಂಜಿನಿಯರ್ ಡಿ. ಎಂ. ರವಿ ಅಮಾನತಾಗಿದ್ದು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಘುನಂದನಮೂರ್ತಿ ಆದೇಶ ಮಾಡಿದ್ದಾರೆ.
ತಾಲೂಕಿನ ಆನೆಗೊಂದಿ ಹಾಗೂ ಮಲ್ಲಾಪುರ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಲೋಪ ಎಸಗಿ, ಕೆಲಸಕ್ಕಿಂತ ಹೆಚ್ಚುವರಿ ಬಿಲ್ ಮಾಡಿ ಸರ್ಕಾರಕ್ಕೆ ಹಾನಿ ಮಾಡಿದ್ದಾರೆ ಎಂಬ ಆರೋಪ ಅಮಾನತಾದ ಅಧಿಕಾರಿಯ ಮೇಲಿದೆ.
ಈ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಿದ ಹಿನ್ನೆಲೆ ಇಲಾಖಾವಾರು ತನಿಖೆ ಕೈಗೊಂಡಾಗ ಸರ್ಕಾರದ ಬೊಕ್ಕಸಕ್ಕೆ 22.92 ಲಕ್ಷ ರೂಪಾಯಿ ಮೊತ್ತದ ಹಾನಿ ಮಾಡಿದ್ದಾಗಿ ತನಿಖಾಧಿಕಾರಿಗಳು ನೀಡಿದ್ದ ವರದಿ ಆಧಾರಿಸಿ ಜೆಇ ಯನ್ನು ಅಮಾನತು ಮಾಡಲಾಗಿದೆ.
ಇದೇ ರೀತಿಯಲ್ಲಿ ನಾನಾ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ ಈಗಾಗಲೇ ನಾಲ್ವರು ಹಿರಿಯ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದ ಬೆನ್ನಲ್ಲೆ, ಜೆಇಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇನ್ನಷ್ಟು ಜೆಇ ಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಮೂಲಗಳು ತಿಳಿಸಿವೆ.