ಕುಷ್ಟಗಿ (ಕೊಪ್ಪಳ): ತಾಲೂಕಿನ ತಾವರಗೇರಾದ ಗೊಂದಲಿಗರ ಪದಕಾರ, ತತ್ವಪದಕಾರ ತಿಪ್ಪಣ್ಣ ಅಂಬಾಜಿ ಸುಗತೇಕರ ಅವರು 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಂಶಪಾರಂಪರಿಕವಾಗಿ ಜಾನಪದ ಪ್ರಕಾರಗಳಲ್ಲಿ ಒಂದಾದ ಗೊಂದಲಿಗರ ಪದ ಹಾಡುಗಾರಿಕೆಯಿಂದ ಜನಮನ್ನಣೆ ಗಳಿಸಿದ್ದ ತಿಪ್ಪಣ್ಣ ಅಂಬಾಜಿ ಸುಗತೇಕರ ಅವರಿಗೆ ಕಡೆಗೂ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದಿದೆ.
2020ನೇ ಸಾಲಿನ ರಾಜ್ಯದ 28 ಜನ ಕಲಾವಿದರಲ್ಲಿ ಕೊಪ್ಪಳ ಜಿಲ್ಲೆಯಿಂದ ಇವರು ಒಬ್ಬರಾಗಿದ್ದು, ಪ್ರಶಸ್ತಿ ಸಿಕ್ಕ ಖುಷಿಗೆ ಅವರ ಕಣ್ಣಲ್ಲಿ ಆನಂದಭಾಷ್ಪ ಕಾಣಿಸಿದೆ. ಇದೇ ವೇಳೆ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಶಸ್ತಿ ದೊರೆತ ಖುಷಿಯನ್ನು ಈಟಿವಿ ಭಾರತ ಜೊತೆ ಹಂಚಿಕೊಂಡ ತಿಪ್ಪಣ್ಣ ಅವರು, ಮಂಡ್ಯದಲ್ಲಿ ಗೊಂದಲಿಗರ ಪದವನ್ನು ಜಾನಪದ ಕಲಾ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರ ಮುಂದೆ ಹಾಡಿದ್ದೆ. ಅವರು ನನ್ನ ಕಲೆಗೆ ಮೆಚ್ಚಿ ಈ ಪ್ರಶಸ್ತಿಯ ಗೌರವ ನೀಡಿದ್ದಾರೆ.
ಓದಿ-ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ : ಚಾಮರಾಜನಗರದಲ್ಲಿ ಈ ಬಾರಿ ಕಾರ್ಯಕ್ರಮ
ಗೊಂದಲಿಗರ ಪದವನ್ನು ವಂಶಪಾರಂಪರಿಕವಾಗಿ ಹಾಡುತ್ತಾ ಬಂದಿದ್ದೇನೆ. ಬಡತನ ಕುಟುಂಬ, ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಿದ್ದ ಸಂದರ್ಭದಲ್ಲಿ ಕೊರೊನಾದಿಂದ ಕಾರ್ಯಕ್ರಮಗಳಿಲ್ಲದೇ ಬಹಳಷ್ಟು ಸಂಕಷ್ಟ ಅನುಭವಿಸಿದ್ದೇನೆ. ಇದ್ದ ಒಬ್ಬ ಮಗ ಬುದ್ದಿಮಾಂದ್ಯನಾಗಿದ್ದು, ಇನ್ನೊಬ್ಬ ಮಗ ಚಾಲಕನಾಗಿ ನನ್ನ ಕಲೆಗೆ ಸಾಥ್ ನೀಡುತ್ತಿದ್ದಾನೆ.
ಸರ್ಕಾರದಿಂದ ಕಲಾವಿದರ ಮಾಶಾಸನ ಬರುತ್ತಿದ್ದು, 13 ತಿಂಗಳಲ್ಲಿ 6 ತಿಂಗಳ ಮಾತ್ರ ಬಂದಿದ್ದು, ಉಳಿದ ಬಾಕಿ ಹಣವನ್ನು ಪಾವತಿಸಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನೆವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಜಾನಪದ ಕಲೆಯನ್ನು ಸಂಕಷ್ಟ ಕಾಲದಲ್ಲಿಯೂ ಉಳಿಸಿಕೊಂಡು ಬಂದಿರುವುದು ಆತ್ಮಸಂತೃಪ್ತಿಯಾಗಿದೆ. ಸಾಯುವವರೆಗೂ ಈ ಕಲೆ ಉಳಿಸಿ ಬೆಳೆಸುವೆ. ಈಗಲಾದರೂ ಸರ್ಕಾರ ಪ್ರಶಸ್ತಿ ಗುರುತಿಸಿ ನೀಡಿರುವುದು ಸಂಕಷ್ಟದ ದಿನಗಳನ್ನು ಮರೆಯಿಸಿದೆ ಎನ್ನುತ್ತಾರೆ ತಿಪ್ಪಣ್ಣ ಅಂಬಾಜಿ ಸುಗತೇಕರ.