ಗಂಗಾವತಿ: ಕನಕಗಿರಿ ತಾಲ್ಲೂಕಿನ ನವಲಿ ಬಳಿ ಉದ್ದೇಶಿತ ಸಮತೋಲನಾ ಜಲಾಶಯ ನಿರ್ಮಾಣದ ಸರ್ವೆ ಕಾರ್ಯ ಕೈಗೊಳ್ಳಲು ಜಲ ಸಂಪನ್ಮೂಲ ಇಲಾಖೆಯ ಅಧೀನ ಕಾರ್ಯದರ್ಶಿ ಆಡಳಿತಾತ್ಮಕ ಹಣಕಾಸು ಅನುಮೋದನೆಗೆ ಸಹಿ ಹಾಕಿದ್ದಾರೆ.
ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಜಲಾಶಯದ ಸಂಗ್ರಹಣ ಸಾಮರ್ಥ್ಯ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ನೀಗಿಸಲು ಪರ್ಯಾಯ ಮಾರ್ಗೋಪಾಯವಾಗಿ ನವಲಿ ಗ್ರಾಮದ ಹತ್ತಿರ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದೀಗ ಸರ್ವೇ ಸಮೀಕ್ಷೆ ಕೈಗೊಳ್ಳಲು 14.30 ಕೋಟಿ ಮೊತ್ತದ ಅಂದಾಜಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದಲ್ಲಿ 31.616 ಟಿಎಂಸಿಯಷ್ಟು ಹೂಳು ತುಂಬಿದ ಪರಿಣಾಮ ಸಂಗ್ರಹಣಾ ಸಾಮರ್ಥ್ಯ ಕುಸಿದು ತ್ರಿವಳಿ ಜಿಲ್ಲೆಯ ಜನರಿಗೆ ಸಮಸ್ಯೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಜಲಾಶಯಕ್ಕೆ ಸೇರುತ್ತಿರುವ ಹೂಳಿನ ಪ್ರಮಾಣ ಅಧಿಕವಾಗುತ್ತಿದ್ದು, ಇದು ಸಮಸ್ಯೆಯಾದ ಹಿನ್ನೆಲೆ ಸಮತೋಲನಾ ಜಲಾಶಯಕ್ಕೆ ಸರ್ಕಾರ ಯೋಜನೆ ರೂಪಿಸಿದೆ.
ಉದ್ದೇಶಿತ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಸರ್ವೆ ಸಮೀಕ್ಷೆ ಕೈಗೊಳ್ಳಲು ಕನ್ಸಲ್ಟೆನ್ಸಿಯ ಅಂದಾಜು ಪಟ್ಟಿಯನ್ನು ಕಳೆದ ಜುಲೈ ತಿಂಗಳಲ್ಲಿ ನಡೆದ ನೀರಾವರಿ ನಿಗಮದ ನಿರ್ದೇಶಕರ 88ನೇ ಸಭೆಯಲ್ಲಿ ಮಂಡಿಸಲಾಗಿತ್ತು, ಇದೀಗ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.