ಕೋಲಾರ: ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆಯಾದ ಹಿನ್ನೆಲೆ ಕೋಲಾರದಲ್ಲೂ ಝೀಕಾ ವೈರಸ್ ಕುರಿತು ಜಿಲ್ಲಾ ಅರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ. ಕೋಲಾರ ಜಿಲ್ಲೆಯಲ್ಲಿ ಸದ್ಯಕ್ಕೆ ಝೀಕಾ ವೈರಸ್ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಕೋಲಾರ ಜಿಲ್ಲೆಯಿಂದ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಎರಡು ಆರೋಗ್ಯ ಕೇಂದ್ರದ ವ್ಯಾಪ್ತಿಯಿಂದ ಸೊಳ್ಳೆಗಳನ್ನು ಹಿಡಿದು ಲ್ಯಾಬೋರೇಟರಿಗೆ ಕಳುಹಿಸಲಾಗಿದೆ.
ಮಾಲೂರು ತಾಲೂಕಿನ ದೊಡ್ಡ ಶಿವಾರ ಹಾಗೂ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಕಾಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ವರದಿ ನೆಗೆಟಿವ್ ಬಂದಿದೆ. ಆದರೆ, ದೊಡ್ಡಶಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ವರದಿ ಬಾಕಿ ಇದ್ದು, ಝೀಕಾ ರೋಗ ಲಕ್ಷಣದ ಕುರಿತು ಎಚ್ಚರ ವಹಿಸಲಾಗಿದೆ.
ಝೀಕಾ ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ಝೀಕಾ ವೈರಸ್‌ಗೆ ಆತಂಕ ಪಡುವ ಅಗತ್ಯವಿಲ್ಲ ಅನ್ನೋದು ಆರೋಗ್ಯಾಧಿಕಾರಿಗಳ ಮಾತು. ಇನ್ನೂ ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ತರಹದಲ್ಲಿ ಹರಡುವ ಕಾಯಿಲೆ ಇದಾಗಿದ್ದು, ಟೈಗರ್ ಮಸ್ಕಿಟೋ ಎಂದು ಕರೆಯಲಾಗುವ ಸೊಳ್ಳೆಯಿಂದ ಈ ರೋಗ ಹರಡುತ್ತದೆ.
ಈ ರೋಗದ ಲಕ್ಷಣಗಳೇನು?: ಜ್ವರ, ಮೈಕೈ ನೋವು, ಗಂಟಲು ನೋವು, ಕಣ್ಣು ಕೆಂಪಾಗುವುದು, ಸ್ನಾಯು, ಮಂಡಿ ಸುಸ್ತು ಇದರ ಲಕ್ಷಣಗಳಾಗಿದೆ. ಇದಕ್ಕೆ ನಿರ್ದಿಷ್ಟ ವಾದ, ಲಸಿಕೆ ಅಥವಾ ಔಷಧ ಇಲ್ಲ. ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಜ್ವರ, ದದ್ದು ಅಥವಾ ಸಂಧಿವಾತದಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ವಿಶ್ರಾಂತಿ ಪಡೆಯಬೇಕು. ಸಾಕಷ್ಟು ದ್ರವ ಆಹಾರವನ್ನು ಸೇವಿಸಬೇಕು. ತಲೆ ನೋವು ಮತ್ತು ಜ್ವರಕ್ಕೆ ಸರಳ ಬಾಹ್ಯ ಔಷಧಗಳೊಂದಿಗೆ ಚಿಕಿತ್ಸೆ ನೀಡಬೇಕು. ಮೇಲಿನ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಆಂತಕಾರಿ ವಿಷಯವೆಂದರೆ ಗರ್ಭಿಣಿ ಸ್ತ್ರೀಯರಿಗೆ ಈ ಕಾಯಿಲೆ ಬಂದರೆ ಹುಟ್ಟುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೂಲಕ ಸಮಸ್ಯೆಯಾಗಲಿದೆ. ಹಾಗಾಗಿ ಗರ್ಭೀಣಿ ಸ್ತ್ರೀಯರು ಜ್ವರ ಬಂದರೆ ಪರಿಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ ಅನ್ನೋದು ವೈದ್ಯರ ಸಲಹೆಯಾಗಿದೆ. ಸೂಕ್ತ ಚಿಕಿತ್ಸೆಯ ಮೂಲಕ ಕಾಯಿಲೆ ತಡೆಯಬಹುದು. ಸಾಮಾನ್ಯವಾಗಿ ಹಗಲು ಸಮಯದಲ್ಲಿ ಕಚ್ಚುವ ಸೊಳ್ಳೆಯಿಂದ ಈ ರೋಗ ಹರಡಲಿದೆ. ಝೀಕಾ ವೈರಸ್ನಿಂದ ಬಳಲುತ್ತಿರುವ ವ್ಯಕ್ತಿಗೆ ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೆ ಝೀಕಾ ವೈರಸ್ ಹರಡುತ್ತದೆ ವೈದ್ಯರ ಸಲಹೆಯಾಗಿದೆ.
ಇದನ್ನೂ ಓದಿ: ರಾಯಚೂರಲ್ಲಿ ಝೀಕಾ ವೈರಸ್ ಆತಂಕ; ಕಟ್ಟೆಚ್ಚರ ಕ್ರಮಕ್ಕೆ ಮುಂದಾದ ಆರೋಗ್ಯಾಧಿಕಾರಿಗಳು