ಕೋಲಾರ: ನಾನು ಇರುವವರೆಗೂ ನನ್ನ ಆಯ್ಕೆ ಮಾಡಿ ಇತಿಹಾಸ ಸೃಷ್ಠಿಸಿದ ಕೋಲಾರದ ಜೊತೆ ಸದಾ ಇರುತ್ತೇನೆ ಎಂದು ಕಾಂಗ್ರೆಸ್ ನಾಯಕ ಕೆ.ಹೆಚ್.ಮುನಿಯಪ್ಪ ಭರವಸೆ ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, 7 ಬಾರಿ ಸಂಸದರಾಗಿ ಮಾಡಿದ ಕೋಲಾರದ ಜನತೆ ಜೊತೆ ಸದಾ ಇರುತ್ತೇನೆ. ಭಾರತ ಇತಿಹಾಸದಲ್ಲೇ 7 ಬಾರಿ ಗೆದ್ದ 10 ಜನರಲ್ಲಿ ಜಾಫರ್ ಶರೀಫ್ ಬಿಟ್ಟರೆ ನನ್ನನ್ನು ದೇಶಕ್ಕೆ ಪರಿಚಯಿಸಿದ ಕೋಲಾರ ಹಾಗೂ ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎನ್ನುವ ಮೂಲಕ ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿಸುದ್ದಿಗೆ ತೆರೆ ಎಳೆದರು.
ಸಿದ್ದರಾಮಯ್ಯನವರು ಕೋಲಾರಕ್ಕೆ ಬರುವ ವಿಚಾರದ ಬಗ್ಗೆ ನನ್ನೊಂದಿಗೆ ಇದುವರೆಗೂ ಯಾರೂ ಚರ್ಚಿಸಿಲ್ಲ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅವರು ಕೋಲಾರಕ್ಕೆ ಬರುವುದಾದರೆ ಯಾರ ಅಭ್ಯಂತರವೂ ಇಲ್ಲ, ಅದು ಅವರ ವಿವೇಚನೆಗೆ ಬಿಟ್ಟಿದ್ದು, ನಾವು ಅವರೊಂದಿಗೆ ಇರುತ್ತೇವೆ. ಜೊತೆಗೆ ರಮೇಶ್ ಕುಮಾರ್ ಜೊತೆಗಿನ ಭಿನ್ನಮತವನ್ನು ಸಹ ನಾನು ಮರೆತಿದ್ದೇನೆ. ಎಲ್ಲವನ್ನು ಮರೆತು ಕಾಂಗ್ರೆಸ್ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಮುನಿಯಪ್ಪ ಘೋಷಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ... ಸಿಎಂ ಭೇಟಿ ಮಾಡಿದ ವಿಚಾರ ತಿಳಿಸಿದ ಕೆ.ಎಚ್.ಮುನಿಯಪ್ಪ
ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿರುವುದು ಸ್ವಾಗತಾರ್ಹ. ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ. ಕರ್ನಾಟಕಕ್ಕೆ ನಿಜಲಿಂಗಪ್ಪನವರ ನಂತರ ಅವಕಾಶ ಸಿಕ್ಕಿದ್ದು ಖರ್ಗೆಗೆ, ಇದರಿಂದ ರಾಜ್ಯ ಕಾಂಗ್ರೆಸ್ಗೆ ಹೆಚ್ಚು ಬಲ ಬಂದಿದೆ. ಆರನೇ ತಾರೀಕಿನಂದು ಬೆಂಗಳೂರಿನಲ್ಲಿ ಅವರಿಗೆ ವಿಶೇಷವಾಗಿ ಸನ್ಮಾನ ಮಾಡಲಿದ್ದೇವೆ ಎಂದು ಹೇಳಿದರು.